ಆನಂದಗಲ್‌ನಲ್ಲಿ ಸ್ಮಶಾನ ಸಮಸ್ಯೆ ಇತ್ಯರ್ಥ

ಆನಂದಗಲ್ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಭೇಟಿ ನೀಡಿದ ವೇಳೆ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆಯಿತು.ಗ್ರಾಪಂ ಸದಸ್ಯ ಶರಣಪ್ಪ, ಮಾಜಿ ಸದಸ್ಯ ಶರಣಪ್ಪ ಕಲಂಗೇರ, ಶರಣಪ್ಪ ಮೆಡಿಕಲ್, ಹುಸೇನಪ್ಪ ಇತರರಿದ್ದರು.
ಆನಂದಗಲ್ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಭೇಟಿ ನೀಡಿದ ವೇಳೆ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆಯಿತು.ಗ್ರಾಪಂ ಸದಸ್ಯ ಶರಣಪ್ಪ, ಮಾಜಿ ಸದಸ್ಯ ಶರಣಪ್ಪ ಕಲಂಗೇರ, ಶರಣಪ್ಪ ಮೆಡಿಕಲ್, ಹುಸೇನಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ನೇತೃತ್ವದ ತಂಡ ಭೇಟಿ
  • ಸರ್ವೇ ನಡೆಸಿ ನಾಲ್ಕು ಗುಂಟೆ ಜಾಗ ನಿಗದಿ
ಕವಿತಾಳ: ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಆನಂದಗಲ್ ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಮಂಗಳವಾರ ಮಸ್ಕಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೆ ಪೊಲೀಸರ ಭದ್ರತೆಯೊಂದಿಗೆ ಸರ್ವೇ ನಡೆಸಿ ಈ ಮೊದಲಿನ ಜಾಗದಲ್ಲೇ ನಾಲ್ಕು ಗುಂಟೆ ರುದ್ರಭೂಮಿಗೆ ಮೀಸಲಿಡುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಯಿತು. 
ಆನಂದಗಲ್ ಗ್ರಾಮದ ಪಕ್ಕದಲ್ಲಿರುವ ಸರ್ವೇ ನಂ.7ರಲ್ಲಿನ ಅಮರಪ್ಪ, ಶೇಖರಪ್ಪ, ಬಸಣ್ಣ ಅವರ ಹೊಲದ ಪಕ್ಕದಲ್ಲಿರುವ ಜಾಗವನ್ನು ಜನರು ರುದ್ರಭೂಮಿಯಾಗಿ ಬಳಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಗ್ರಾಮದಲ್ಲಿ ಮೃಪತಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡುತ್ತಿರುವಾಗ ಅಮರಪ್ಪ ಮತ್ತು ಕುಟುಂಬದವರು ತಡೆದಿದ್ದರು. ಈ ವೇಳೆ ವಾಗ್ವಾದ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. 
ನಂತರ ಸರ್ವೇ ನಂ.7ರಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಅಮರಪ್ಪ ಅವರು ನ್ಯಾಯಕ್ಕಾಗಿ ಲಿಂಗಸುಗೂರು ಎಸಿ ಮೊರೆ ಹೋಗಿದ್ದರು. ಜಾಗ ಪರಿಶೀಲಿಸಿ ಕ್ರಮವಹಿಸಬೇಕೆಂದು ಮಸ್ಕಿ ತಹಸೀಲ್ದಾರ್‌ಗೆ ಸೂಚಿಸಿದ್ದರು. ಹೀಗಾಗಿ ಮಂಗಳವಾರ ಭೇಟಿ ನೀಡಿದ ತಹಸೀಲ್ದಾರ್‌ಗೆ ಸ್ಮಶಾನಕ್ಕೆ ಬೇರೆ ಕಡೆ ಜಾಗ ಗುರುತಿಸಬೇಕೆಂದು ಅಮರಪ್ಪ ಕುಟುಂಬದವರ ಒತ್ತಾಯಿಸಿದರು. 
ಈ ವೇಳೆ ಗ್ರಾಮಸ್ಥರು ನಾವು ಇದೇ ಜಾಗವನ್ನು ಹಲವು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದು, ಸ್ಥಳಾಂತರಿಸಬಾರದೆಂದು ಪಟ್ಟು ಹಿಡಿದರು. ಈ ವೇಳೆ ಅಮರಪ್ಪ ಕುಟುಂಬ ಸದಸ್ಯರು-ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ತಹಸೀಲ್ದಾರ್ ಅವರು ಕರೆ ಮಾಡಿ ಪೊಲೀಸರು ಸ್ಥಳಕ್ಕೆ ಕರೆಸಿದರು. ಅಲ್ಲದೆ ಖಾಕಿ ಬಂದೋಬಸ್ತ್‌ನಲ್ಲಿ ಸರ್ವೇ, ಈ ಮೊದಲಿದ್ದ ಜಾಗದಲ್ಲಿ ಸ್ಮಶಾನಕ್ಕಾಗಿ 4 ಗುಂಟೆ ನಿಗದಿಪಡಿಸುವ ಮೂಲಕ ಸಮಸ್ಯೆ ಪರಿಹರಿಸಿದರು. ಅಲ್ಲದೆ ಮುಸ್ಲಿಮರ ಖಬರ್‌ಸ್ತಾನ್‌ಗೆ ಸಂಪರ್ಕಿಸುವ ದಾರಿ ಸಮಸ್ಯೆ ಮತ್ತು ಕಾಂಪೌಂಡ್ ನಿರ್ಮಾಣದ ಸಮಸ್ಯೆಯನ್ನೂ ಇತ್ಯರ್ಥಪಡಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net