ಹೊಲಗಳಿಗೆ ನುಗ್ಗಿದ ಕಾಲುವೆ ನೀರು Canal water entering the fields
ಮಸ್ಕಿ: ತಾಲೂಕಿನ ಗುಡದೂರು ಗ್ರಾಪಂ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ನಾಲೆಯ 54ನೇ ಉಪ ಕಾಲುವೆಗೆ ಹೆಚ್ಚು ನೀರು ಹರಿದು ಬಂದ ಕಾರಣ ರೈತರ ಹೊಲಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಈಗಗಾಲೇ ಎರಡನೇ ಬೇಳೆಗೆ ನೀರು ಕೊಡುವುದಿಲ್ಲ ಎಂಬ ಕಾರಣದಿಂದ ರೈತರು ಕೃಷಿ ಚಟುವಟಿಕೆ ಕೈಗೊಂಡಿಲ್ಲ. ಜಮೀನಿನಲ್ಲಿ ಕಟಾವು ಮಾಡಿದ್ದ ಭತ್ತದ ರಾಶಿ ಹಾಗೂ ಹುಲ್ಲು ಹಾಕಲಾಗಿತ್ತು.
ಏಕಾಏಕಿ ಅಧಿಕಾರಿಗಳು ರೈತರಿಗೆ ಸೂಚನೆ ಕೊಡದೆ ಹೆಚ್ಚುವರಿ ನೀರು ಕಾಲುವೆಗೆ ಹರಿಸಿದ್ದರಿಂದ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಭತ್ತ ಹಾಳಾಗಿದೆ. ಕಾಲುವೆ ದಂಡೆ ಮೇಲೆ ಜನರ ಸಂಚಾರಕ್ಕೆ ನಿರ್ಮಿಸಿದ ಮಣ್ಣಿನ ರಸ್ತೆ ಕೆಸರು ಗದ್ದೆಯಂತಾಗಿದೆ.
ಇದರಿಂದ ರಸ್ತೆ ಯಾವುದು, ಕಾಲುವೆ ಯಾವುದು ಎಂದು ಗುರುತಿಸಲಾಗದಷ್ಟು ನೀರು ಆವರಿಸಿದೆ.