ತೊಗರಿ ಬೆಳೆಗೆ ಬಂಪರ್ ಬೆಲೆ

ಸಿಂಧನೂರು ತಾಲೂಕಿನಲ್ಲಿ ರೈತರು ಬೆಳೆದಿರುವ ತೊಗರಿ.
ಸಿಂಧನೂರು ತಾಲೂಕಿನಲ್ಲಿ ರೈತರು ಬೆಳೆದಿರುವ ತೊಗರಿ.
Published on
ಸಿಂಧನೂರು: ಪಾತಾಳಕ್ಕೆ ಕುಸಿದಿದ್ದ ತೊಗರಿ ಬೆಲೆ ಈಗ ಏರುಗತಿಯಲ್ಲಿ ಸಾಗಿದ್ದು, ಗುರುವಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 8300 ರೂ. ಮಾರಾಟವಾಗಿದೆ. ಇನ್ನೂ 10 ಸಾವಿರ ರೂ. ವರೆಗೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕಿನ 19600 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು ಅತಿವೃಷ್ಟಿಯಿಂದಾಗಿ ಬಹುತೇಕ ಬೆಳೆ ಹಾಳಾಗಿ, ಉತ್ಪಾದನೆಯೂ ಕುಸಿದಿದೆ. ಪರಿಣಾಮ ಮಾರುಕಟ್ಟೆಯಲ್ಲಿ ತೊಗರಿ ದರ ದಿನೇದಿನೆ ಹೆಚ್ಚತೊಡಗಿದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 6800 ರೂ. ದಿಂದ 7100 ರೂ. ಬೆಲೆ ಇತ್ತು. ಈಗ 1200 ರೂ.ದಿಂದ 1400 ರೂ.ವರೆಗೆ ದರ ಜಿಗಿತ ಕಂಡಿದೆ. ಫೆ.5ರಂದು ಸಿಂಧನೂರಿನ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 8300 ರೂ. ದರದಲ್ಲಿ ತೊಗರಿ ಮಾರಾಟವಾಗಿದೆ. ಅದರಿಂದ 7500 ರೂ. ಇತ್ತು. ಕಳೆದ ಹತ್ತು ದಿನಗಳಲ್ಲಿ ತೊಗರಿ ಬೆಲೆ ಏರು ಗತಿಯಲ್ಲಿ ಸಾಗಿದೆ. ಬೇರೆ ನಗರದಲ್ಲಿಯೂ ಇದರ ಬೆಲೆ 9 ಸಾವಿರ ರೂ. ದಾಟಿದೆ ಎನ್ನಲಾಗುತ್ತಿದೆ. ಇಲ್ಲಿ ಉತ್ಪಾದನೆ ಕಡಿಮೆ, ತೊಗರಿಯ ಗುಣಮಟ್ಟದಲ್ಲಿಯೂ ವ್ಯತ್ಯಾಸವಾಗುವುದರಿಂದ ದರದ ಏರಿಳಿತ ನಿಧಾನಗತಿಯಲ್ಲಿದೆ.
ಕಳೆದ ಮುಂಗಾರಿನಲ್ಲಿ 19600 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದಿದ್ದರೂ, ರೈತರ ಕೈಗೆ ಬಂದದ್ದು ಮಾತ್ರ ಕಡಿಮೆ. ಭಾರಿ ಮಳೆ, ಇತರ ಕಾರಣಗಳಿಂದ ಸಾಕಷ್ಟು ತೊಗರಿ ಹಾಳಾಗಿದೆ. ಅಳಿದುಳಿದ ತೊಗರಿ ಧಾನ್ಯವು ಬಂಪರ್ ದರಕ್ಕೆ ಮಾರಾಟವಾಗುವ ಮುನ್ಸೂಚನೆ ಕಂಡು ಬಂದಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಎಪಿಎಂಸಿಗೂ ರೈತರು ತೊಗರಿ ಧಾನ್ಯವನ್ನು ಮಾರಾಟಕ್ಕೆ ತರುತ್ತಿದ್ದಾರೆ. ಇನ್ನೂ ಕೆಲವು ರೈತರು ತೊಗರಿಗೆ ಬಂಪರ್ ಬೆಲೆ ಬರಬಹುದೆಂದು ಲೆಕ್ಕಾಚಾರ ಹಾಕಿಕೊಂಡು ಬೆಲೆ ನಿರೀಕ್ಷೆಯಲ್ಲಿದ್ದಾರೆ.
ಖರೀದಿ ಕೇಂದ್ರಗಿಂತ ಹೆಚ್ಚು
ಪ್ರತಿ ಬಾರಿಯೂ ರೈತರು ತೊಗರಿ ಖರೀದಿ ಕೇಂದ್ರಕ್ಕಾಗಿ ಕಾಯುತ್ತಿದ್ದರು. ಈ ಬಾರಿ ಮುಕ್ತಮಾರುಕಟ್ಟೆಯಲ್ಲಿಯೇ ತೊಗರಿ ಬೆಲೆ ಏರಿಕೆಯಾಗುತ್ತಿದ್ದು, ಖರೀದಿ ಕೇಂದ್ರದಲ್ಲಿ ಕ್ವಿಂ.ಗೆ 8 ಸಾವಿರ ರೂ. ನಿಗದಿಪಡಿಸಿದ್ದರಿಂದ ಯಾರೂ ನೋಂದಾಯಿಸುತ್ತಿಲ್ಲ. ಕೆಲವರು ನೋಂದಣಿ ಮಾಡಿಸಿದ್ದು ಮಾರಾಟಕ್ಕೆ ತೊಗರಿ ತರುತ್ತಿಲ್ಲ. ಇದುವರೆಗೆ ಒಂದು ಕಾಳು ತೊಗರಿ ಖರೀದಿಯಾಗಿಲ್ಲ. ವಾರ ತಡೆದರೆ ಪ್ರತಿ ಕ್ವಿಂ.ಗೆ 9 ಸಾವಿರ ರೂ. ಅಧಿಕ ದರ ಸಿಗುವ ಭರವಸೆ ಹೊಂದಿದ್ದು, ಇದು 10 ಸಾವಿರ ರೂ.ಗೆ ಮುಟ್ಟಿದರೂ ಆಶ್ಚರ್ಯ ಪಡುವಂತಿಲ್ಲ. ಮಾರುಕಟ್ಟೆಗೆ ನೀಡಿದರೆ, ಹಣ ಬರುವುದರಿಂದ ಖರೀದಿ ಕೇಂದ್ರದ ಕಡೆ ಮುಖ ಮಾಡುತ್ತಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net