ಕವಿತಾಳ: ಹೊಲಕ್ಕೆ ಹೋಗಲು ರಸ್ತೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಪಾಮನಕಲ್ಲೂರು ಬಳಿ ರಾಷ್ಟ್ರೀಯ ಹೆದ್ದಾರಿ 748 ಕಾಮಗಾರಿ ಸ್ಥಳದಲ್ಲಿ ರೈತರು ಮಂಗಳವಾರ ಧರಣಿ ನಡೆಸಿದರು.
ಬೆಳಗಾವಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 748 ಕಾಮಗಾರಿ ನಮಗೆ ಮಾರಕವಾಗಿದೆ. ಒತ್ತಾಯವಾಗಿ ನಮ್ಮ ಭೂಮಿ ಪಡೆದು ಹೆದ್ದಾರಿ ನಿರ್ಮಿಸುತ್ತಿದ್ದಾರೆ. ಆದರೆ, ನಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಆದ್ದರಿಂದ ನಮ್ಮ ಜಮೀನಿಗೆ ಹೋಗಲು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಆರ್ ಕಂಪನಿಯ ಪಿಡಿ ನಾಗೇಂದ್ರ ಶರ್ಮ ಮಾತನಾಡಿ, ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲಿವರೆಗೆ ಹೋರಾಟ ಕೈಬಿಡಬೇಕು ಎಂದು ಮನವಿ ಮಾಡಿದರು. ಆದರೆ, ರಸ್ತೆ ನಿರ್ಮಿಸುವವರೆಗೆ ಹೋರಾಟ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಪ್ರಾಧಿಕಾರದ ಪಿಡಿ ಭುವನೇಶ್ವರ ಅವರು, ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ರೈತರು ಧರಣಿ ಹಿಂಪಡೆದರು.
ತಾಪಂ ಮಾಜಿ ಸದಸ್ಯ ಸಂತೋಷ ರಾಜಗುರು, ರೈತರಾದ ಬಸವರಾಜ, ನಾಗಲಿಂಗಪ್ಪ, ವೀರಭದ್ರಪ್ಪ, ಮಲ್ಲಯ್ಯ, ಗುಡದಪ್ಪ, ಶಿವಗೇನಿ, ದಾವಲಸಾಬ್, ಖಾಜಾ ಹುಸೇನ್‌ಸಾಬ್, ಬಸವರಾಜ ಕಲ್ಲೂರು, ಶೇಖರಪ್ಪ ಯಕ್ರನಾಳ, ಅಶೋಕ ಇತರರಿದ್ದರು.