ಮಂದಹಾಸ ಮೂಡಿಸಿದ ಎರಡೂ ಜಲಾಶಯ ಒಳಹರಿವು

ನಾರಾಯಣಪುರ ಜಲಾಶಯದಲ್ಲಿ 20 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರಿಂದ ಡ್ಯಾಂ ನಳನಳಿಸುತ್ತಿರುವುದು.
ನಾರಾಯಣಪುರ ಜಲಾಶಯದಲ್ಲಿ 20 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರಿಂದ ಡ್ಯಾಂ ನಳನಳಿಸುತ್ತಿರುವುದು.
Published on
ದೇವದುರ್ಗ: ಮುಂಗಾರು ದುರ್ಬಲವಾಗಿ ಒಂದೂವರೆಗೆ ತಿಂಗಳಿನಿಂದ ಭಣಗುಡುತ್ತಿದ್ದ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಿಗೆ ಎರಡ್ಮೂರು ದಿನಗಳಿಂದ ಜೀವಕಳೆ ಬಂದಿದೆ. ಒಳಹರಿವು ಆರಂಭವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. 
ಕೃಷ್ಣಾ ಮೇಲ್ದಂಡೆ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎರಡು ದಿನಗಳಿಂದ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಆಲಮಟ್ಟಿಯಲ್ಲಿ 40 ಸಾವಿರ ಹಾಗೂ ನಾರಾಯಣಪುರ ಜಲಾಶಯದಲ್ಲಿ 15 ಸಾವಿರ ಕ್ಯೂಸೆಕ್ ಒಳಹರಿವಿದ್ದು, ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ಆಲಮಟ್ಟಿ ಡ್ಯಾಂ ಶೇ.76, ನಾರಾಯಣಪುರ ಜಲಾಶಯ ಶೇ.60 ನೀರಿನ ಸಂಗ್ರಹವಾಗಿರುವುದು ತಾಲೂಕಿನ ರೈತರ ಮುಖ ಅರಳಿದೆ. 
ತಾಲೂಕು ಸೇರಿ ಕೃಷ್ಣಾ ಮೇಲ್ದಂಡೆಯಲ್ಲಿ ಎರಡ್ಮೂರು ದಿನಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿದೆ. ಹೀಗಾಗಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಅಲ್ಲದೆ ಕೊಯ್ನ ಜಲಾಶಯದಿಂದಲೂ ಸುಮಾರು 50ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಇದರಿಂದ ಆಲಮಟ್ಟಿಯಲ್ಲಿ ನೀರಿನ ಸಂಗ್ರಹ ಅಧಿಕವಿದೆ. ಎರಡೂ ಜಲಾಶಯ ಭರ್ತಿಯಾದರೆ ಮಾತ್ರ ರೈತರ ಬೆಳೆಗಳಿಗೆ ನೀರು ಸಿಗಲಿದೆ. ಜುಲೈ ಅಂತ್ಯಕ್ಕೆ ಡ್ಯಾಂ ಭರ್ತಿಯಾದರೆ ಆಗಸ್ಟ್ ಮೊದಲ ವಾರ ನಾಲೆಗೆ ನೀರು ಹರಿಸುವ ಸಾಧ್ಯತೆಯಿದೆ.
ಸದ್ಯ ನಾರಾಯಣಪುರ ಜಲಾಶಯದಲ್ಲಿ 15500 ಕ್ಯೂಸೆಕ್ ಒಳಹರಿವು ಇದ್ದು, ನೇರವಾಗಿ ನದಿಗೆ ನೀರು ಬಿಡುತ್ತಿಲ್ಲ. ಮುರುಡೇಶ್ವರ ವಿದ್ಯುತ್ ಸ್ಥಾವರ ಘಟಕದ ಮೂಲಕ (ಎಂಪಿಸಿಎಲ್) 6 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
33.31ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 20.25(ಶೇ.60) ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇನ್ನು 123ಟಿಎಂಸಿ ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 94.64ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 40173ಕ್ಯೂಸೆಕ್ ಒಳಹರಿವು ಇದ್ದು, 16,458 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಸದ್ಯದ ಬೆಳವಣಿಗೆ ಸಕರಾತ್ಮವಾಗಿದ್ದು ಐಸಿಸಿ ಸಭೆ ಶೀಘ್ರ ಕರೆಯುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net