ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಚನ
ಮಾನ್ವಿ ತಾಲೂಕಿನ ಚೀಕಲಪರ್ವಿ ರುದ್ರಮುನಿ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
Published on:
Copied
Follow Us
ಮಾನ್ವಿ: ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಲ್ಲಿ ಶರಣರು ಕಾಯಕ, ದಾಸೋಹ ಮತ್ತು ಜಂಗಮ ಸೇವೆಯಿಂದ ಸತ್ಯದ ಮಾರ್ಗದಲ್ಲಿ ಸಾರ್ಥಕ ಜೀವನ ಸಾಗಿಸಿದರು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಚೀಕಲಪರ್ವಿ ರುದ್ರಮುನಿ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ರುದ್ರಮುನಿ ಶಿವಯೋಗಿಗಳ 98 ನೇ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮಸಭೆಯಲ್ಲಿ ಭಾನುವಾರ ಮಾತನಾಡಿದರು. ಶರಣರು ನುಡಿದಂತೆ ನಡೆದು ವಚನಗಳನ್ನು ರಚಿಸಿದರು. ಸಮಾನತೆ ಸಾರಿದ ಶರಣರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಗುರು, ಲಿಂಗ, ಜಂಗಮರು ಮತ್ತು ಇಷ್ಟಲಿಂಗದ ಬಗ್ಗೆ ಭಕ್ತಿ ಮತ್ತು ಗೌರವ ಬೆಳೆಸಿಕೊಳ್ಳಬೇಕು. ಭಕ್ತರು ಮಠಕ್ಕೆ ನೀಡಿದ ಕಾಣಿಕೆಗಳನ್ನು ಸಮಾಜದ ಉದ್ಧಾರಕ್ಕೆ ವಿನಿಯೋಗಿಸಲಾಗುತ್ತದೆ. ಬಳ್ಳಾರಿಯಲ್ಲಿ ವೀರಶೈವ ಸಂಘದ ಸ್ಥಾಪನೆಗೆ ರುದ್ರಮುನೀಶ್ವರ ತಾತ 250 ಬೆಳ್ಳಿ ನಾಣ್ಯಗಳನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಈ ಭಾಗದಲ್ಲಿನ ಮಠಗಳು ಜನರಿಗೆ ಬಸವ ತತ್ವದಡಿ ಸನ್ಮಾರ್ಗ ತೋರುತ್ತ ಬಂದಿವೆ. 1992 ರಲ್ಲಿ ತುಂಗಭದ್ರಾ ನದಿಯಲ್ಲಿ ನೆರಹಾವಳಿ ಬಂದು ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಜನರು ಸಂಕಷ್ಟದಲ್ಲಿದ್ದಾಗ ಚೀಕಲಪರ್ವಿ ಮಠದ ಶ್ರೀಗಳು ಜನರಿಗೆ ಆಶ್ರಯ ಧೈರ್ಯ ತುಂಬಿದರು ಎಂದರು.
ಇದಕ್ಕೂ ಮುನ್ನ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅವರನ್ನು ಸುಮಂಗಲಿಯರು ಕುಂಭ ಮತ್ತು ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.