ಸಿಂಧನೂರು: ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳು ಸಂಭವಿಸಿದ ವೇಳೆ ತಲೆಗೆ ಪೆಟ್ಟು ಬೀಳದೆ ಜೀವ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ಚಂದ್ರಶೇಖರ ಜಿ.ನಾಯಕ ಹೇಳಿದರು.
ಶಹರ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಹರ ಮತ್ತು ಸಂಚಾರಿ ಠಾಣೆಗಳ ಸಹಯೋಗದಲ್ಲಿ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಮಾತ್ರ ಹೆಲ್ಮೆಟ್ ಧರಿಸಿ ನಂತರ ಬೈಕ್‌ನ ಹ್ಯಾಂಡಲ್‌ಗಳಿಗೆ ಹಾಕಬಾರದು. ಇದರಿಂದಲೂ ಅಪಘಾತ ಸಂಭವಿಸಿದ ಅನೇಕ ಪ್ರಕರಣಗಳಿವೆ. ಬೈಕ್, ಕಾರು ಸೇರಿದಂತೆ ಎಲ್ಲ ವಾಹನಗಳ ಸವಾರರು ಚಾಲನಾ ಪರವಾನಗಿ, ಇನ್ಶೂರೆನ್ಸ್ ಕಡ್ಡಾಯವಾಗಿ ಹೊಂದಿರಬೇಕು. ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಜಂಪ್ ಮಾಡಬಾರದು. ತ್ರಿಬಲ್ ರೈಡಿಂಗ್, ಮದ್ಯಪಾನ ಸೇವಿಸಿ ಮತ್ತು ಅತಿವೇಗದಿಂದ ವಾಹನ ಚಲಾಯಿಸಬಾರದು. ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಗುವುದು. ಇದಕ್ಕೂ ನಿರ್ಲಕ್ಷೃ ತೋರಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ರ‌್ಯಾಲಿ ಮೂಲಕ ನಗರದ ಹಲವು ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ನಂತರ ಕೆಲ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಿದರು.