ಮಸ್ಕಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದೊಳಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆ, ತಮ್ಮ ಸ್ಥಾನ ಹಾಗೂ ರಾಜಕೀಯ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರ ಹಿತದ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಆದರೆ ಉತ್ತರಾಖಂಡದಲ್ಲಿ ದಲಿತ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿದ ಘಟನೆ ಅದರ ನಿಲುವಿನ ವೈರುಧ್ಯವನ್ನು ತೋರಿಸುತ್ತದೆ.
ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿರುವಾಗ, ಅವರ ಸಮಸ್ಯೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಿತ್ತು. ಅದನ್ನು ಮಾಡದೆ ಈಗ ರೈತರ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಉಪಾಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಡಿ. ಚಿಗರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶೇಖ್‌ಮಹೆಬೂಬ ಮುದ್ದಾಪೂರ ಇದ್ದರು.