ಮಸ್ಕಿ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ನಿರ್ವಹಣೆ ಕುರಿತು ಟಾಸ್ಕ್ ಪೋರ್ಸ್ ಸಭೆ ನಡೆಯಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ ಇದ್ದರು.
ಮಸ್ಕಿ: ಪಟ್ಟಣ ಹಾಗೂ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಮುಂಜಾಗೃತ ಕ್ರಮ ಕೈಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ನಿರ್ವಹಣೆ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸಭೆೆಯಲ್ಲಿ ಮಾತನಾಡಿದರು. ಈಗಿನಿಂದಲೇ ನೀರಿನ ಮೂಲ ಗುರುತಿಸಿ, ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆ ಆಗದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಬೇಕು.
ಅಗತ್ಯವಿದ್ದರೆ ಹೆಚ್ಚುವರಿ ಕೊಳವೆಭಾವಿ ಕೊರೆಸಿ ನೀರು ಬಿಡಲು ಪ್ರಯತ್ನಿಸಿ. ಅನುದಾನದ ಕೊರತೆಯಿದ್ದರೆ 15ನೇ ಹಣಕಾಸು ಯೋಜನೆ ಮೂಲಕ ಕೊಳವೆ ಭಾವಿಗಳನ್ನು ಕೊರೆಸಬೇಕು.
ಮಾರ್ಚ್ ಕೊನೇ ವಾರದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ಕುಡಿಯಲು ನೀರು ಹರಿಸಬಹುದು. ಎಲ್ಲ ಕೆರೆಗಳನ್ನು ತುಂಬಿಸಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಿ.
ಎಡದಂಡೆ ಕಾಲುವೆಗೆ ಕುಡಿವ ನೀರು ಹರಿಸಿದಾಗ ವಿದ್ಯುತ್ ಸಮಸ್ಯೆಯಾಗದಂತೆ ಜೆಸ್ಕಾ ಅಧಿಕಾರಿಗಳು, ಇಂಜಿನಿಯರ್‌ಗಳು ಗಮನಹರಿಸಬೇಕು. ಜನರಿಗೆ ಕುಡಿವ ನೀರಿನ ತೊಂದರೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ, ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಪಪಂ ಮುಖ್ಯಾಧಿಕಾರಿಗಳು, ಗ್ರಾಪಂ ಪಿಡಿಒಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.