ಮಸ್ಕಿ: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಪಂಚ ವಾರ್ಷಿಕೋತ್ಸವ ಹಾಗೂ 33ನೇ ವರ್ಷದ ಮಹಾಮಂಡಲ ಪೂಜೆ ಡಿ. 19ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಪ್ರಮುಖ ಬಸನಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.
ವಾರ್ಷಿಕೋತ್ಸವ, ಪೂಜೆ ನಿಮಿತ್ತ ಡಿ.14 ರಿಂದ 18ರವರೆಗೆ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಡಿ.17 ರಂದು ದೇವಸ್ಥಾನದಲ್ಲಿ 48 ಅಯ್ಯಪ್ಪಸ್ವಾಮಿ ಶಾಸ್ತ್ರ ಹೋಮ ಜರುಗಲಿದ್ದು, 18ರಂದು ಆಂಜನೇಯ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ಮೂರ್ತಿಯೊಂದಿಗೆ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಲಿದೆ.
19ರಂದು ಅಯ್ಯಪ್ಪಸ್ವಾಮಿ ಮಹಾಮಂಡಲ ಪೂಜೆ ನಡೆಯಲಿದ್ದು, ಗಚ್ಚಿನಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಗುರುಸ್ವಾಮಿ ರಾಘವೇಂದ್ರ ಚಿನ್ನಿ, ಮಲ್ಲೇಶ ಬಳಿಗಾರ, ಶೇಖರಗೌಡ ಪೊಲೀಸ್ ಪಾಟೀಲ್ ಅವರಿಂದ ಮಹಾಮಂಡಲ ಪೂಜೆ ಜರುಗಲಿದೆ.
ಬೆಳಗ್ಗೆ ನಿರ್ಮಾಲ್ಯ ಪೂಜೆ, ಕಾಕಡಾರತಿ, ಗಣಪತಿ ಹೋಮ, ನವಗ್ರಹ ಪೂಜೆ, ಅಭಿಷೇಕ, ಸಹಸ್ರ ನಾಮಾರ್ಚನೆ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ರಾತ್ರಿ 8:30ಕ್ಕೆ ಅಯ್ಯಪ್ಪಸ್ವಾಮಿಯ 18 ಮೆಟ್ಟಿಲುಗಳ ಪೂಜೆ ಕಾರ್ಯಕ್ರಮ ನಂತರ ಮಹಾಮಂಗಳಾರತಿ ನೆರವೇರಲಿದೆ ಎಂದು ತಿಳಿಸಿದ್ದಾರೆ.