ಸಿಂಧನೂರಿನ ನಗರಸಭೆ ಮುಂಭಾಗ ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ರೈತ ಸಂಘ ಪ್ರತಿಭಟನೆ ನಡೆಸಿದವು. ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ ಜಹಗೀರದಾರ, ಸಂಘದ ಪ್ರಮುಖರಾದ ಶಾಮೀದಸಾಬ, ಚಿಟ್ಟಿಬಾಬು, ಖಾಸಿಂಸಾಬ, ಆಬೀದಾ, ಈರಮ್ಮ ಇದ್ದರು.
ಸಿಂಧನೂರು: ತುಂಗಭದ್ರಾ ಎಡದಂಡೆ 40ನೇ ಉಪಕಾಲುವೆ ಬದಿಯಲ್ಲಿ ವಾಸಿಸುವ 204 ಕುಟುಂಬಗಳಿಗೆ ವಸತಿ ಸೌಕರ್ಯ ಒದಗಿಸಲು ಒತ್ತಾಯಿಸಿ ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ರೈತ ಸಂಘ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದವು.
ಕುಟುಂಬಗಳು ಕಡು ಬಡವರಾಗಿದ್ದು ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಸೂರು ಇಲ್ಲದೆ 40ನೇ ಉಪಕಾಲುವೆ ಬದಿಯಲ್ಲಿ ವಾಸಿಸುತ್ತಿದ್ದಾರೆ. ಮೂಲ ಸೌಕರ್ಯಗಳು ಅಲ್ಲಿಲ್ಲ. ಜ.12 ರಂದು ನೀರಾವರಿ ಇಲಾಖೆ ನೋಟಿಸ್ ಜಾರಿಗೊಳಿಸಿ, ಶೆಡ್‌ಗಳನ್ನು ತೆರವು ಮಾಡುವಂತೆ ಸೂಚಿಸಿದೆ. ಆದರೆ, ಪರ್ಯಾಯ ವ್ಯವಸ್ಥೆ ಇಲ್ಲದೆ ಬೇರೆಡೆ ಎಲ್ಲಿಗೆ ಹೋಗಬೇಕು. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ, ನಿರಾಶ್ರಿತ ಕುಟುಂಬಗಳಿಗೆ ಜಮೀನು ಮತ್ತು ನಿವೇಶನ, ವಸತಿ ಸೌಕರ್ಯ ಕಲ್ಪಿಸಬೇಕು. ಏಳುರಾಗಿಕ್ಯಾಂಪ್‌ನಲ್ಲಿ ವಸತಿ ಸೌಕರ್ಯ ನೀಡಿದ ನಂತರ ತೆರವುಗೊಳಿಸಬೇಕೆಂದು ಎಂದು ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ ಜಹಗೀರದಾರ ಆಗ್ರಹಿಸಿದರು.