ವಾಹನಗಳ ಖರೀದಿಗೆ ಒಪ್ಪಿಗೆ

ಸಿರವಾರ ಪಪಂ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಹಾಜಿ ಚೌದ್ರಿ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಇದ್ದರು.
ಸಿರವಾರ ಪಪಂ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಹಾಜಿ ಚೌದ್ರಿ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಪಂ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
  • ಸಿರವಾರ ಬಜೆಟ್ ಪೂರ್ವಭಾವಿ ಸಭೆ
ಸಿರವಾರ: ಪಟ್ಟಣದ ಮುಖ್ಯರಸ್ತೆ ಸ್ವಚ್ಛಗೊಳಿಸಲು ಒಂದು ಯಂತ್ರ, ರಥಯಾತ್ರೆಯ ವಾಹನ (ಶವ ಸಾಗಿಸುವ)ಗಳನ್ನು ಖರೀದಿಸಲು ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಪಂ ಅಧ್ಯಕ್ಷ ಹಾಜಿ ಚೌದ್ರಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ವಿದ್ಯುತ್ ಬಲ್ಬ್‌ಗಳ ಬದಲಾವಣೆ, ಬ್ಯಾನರ್ ಅಳವಡಿಕೆಗೆ ಸ್ಥಳ ಹಾಗೂ 15ನೇ ಹಣಕಾಸು ಯೋಜನೆಯಡಿ ಐದು ಹೈಮಾಸ್ಟ್ ವಿದ್ಯುತ್ ಅಳವಡಿಸಲು ಸ್ಥಳ ನಿಗದಿ ಕುರಿತು ಚರ್ಚಿಸಲಾಯಿತು. ರಸ್ತೆ ಬದಿ ಸಸಿ ನೆಡುವುದು, ವಿವಿಧ ವಾರ್ಡ್‌ಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಜಲಜೀವನ ಮಿಷನ್ ಯೋಜನೆಯಡಿ ಕಾಮಗಾರಿ ಆರಂಭ, ಶಾಶ್ವತ ಕುಡಿವ ನೀರಿನ ಸರಬರಾಜಿಗೆ ಕೆರೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಕುರಿತು ಪಪಂ ಸದಸ್ಯರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇನ್ನು ಪತ್ರಕರ್ತರಿಗೆ ಪಟ್ಟಣ ಪಂಚಾಯಿತಿ ಬಜೆಟ್‌ನಲ್ಲಿ 10 ಲಕ್ಷ ರೂ. ಆರೋಗ್ಯ ವಿಮೆಗೆ ಮೀಸಲು ಇಡುವಂತೆ ಹಾಗೂ ಪತ್ರಕರ್ತರ ಭವನ ನಿರ್ಮಾಣ ಮಾಡಲು ಸಿಎ ಸೈಟ್ ನೀಡುವ ಕುರಿತು ಚರ್ಚೆ ಮಾಡಲಾಯಿತು. ಸ್ಥಳೀಯ ಮುಖಂಡ ಎನ್.ಉದಯಕುಮಾರ ಸಾಹುಕಾರ ಮಾತನಾಡಿ, ಎಪಿಎಂಸಿಯ ಖಾಲಿ ಜಾಗದಲ್ಲಿ, ಮುಖ್ಯರಸ್ತೆ ಪಕ್ಕದಲ್ಲಿರುವ ತರಕಾರಿ ಹಾಗೂ ಮಾಂಸದ ಅಂಗಡಿಗಳನ್ನು ಎಪಿಎಂಸಿಯ ಖಾಲಿ ಜಾಗದಲ್ಲಿ ಹೊಸದಾಗಿ ಮಳಿಗೆಗಳನ್ನು ನಿರ್ಮಿಸಿ ಸ್ಥಳಾಂತರಿಸಬೇಕೆಂದು ಸಲಹೆ ನೀಡಿದರು.
ಸದಸ್ಯರ ಗೈರು: ಬಜೆಟ್ ಪೂರ್ವಭಾವಿ ಸಭೆಗೆ ಒಟ್ಟು 20 ಜನಪ್ರತಿನಿಧಿಗಳ ಪೈಕಿ ಅಧ್ಯಕ್ಷ ಹಾಜಿ ಚೌದ್ರಿ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ ನಾಯಕ ಹಾಗೂ 4 ಜನ ಸದಸ್ಯರು ಮಾತ್ರ ಕೊನೆವರೆಗೆ ಹಾಜರಿದ್ದರು. ಬಾಕಿ ಸದಸ್ಯರು ಸಭೆ ಆರಂಭದಲ್ಲೇ ಕೆಲ ನಿಮಿಷಗಳತನಕ ಇದ್ದು ಹೊರನಡೆದರು. ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಸದಸ್ಯರಾದ ಸೂರಿ ದುರುಗಣ್ಣ ನಾಯಕ, ಎಚ್.ಮಾರ್ಕಪ್ಪ, ಹಸೇನಲಿಸಾಬ್, ಮೌಲಸಾಬ್ ವರ್ಚಸ್, ಮುಖಂಡರಾದ ರಮೇಶ್ ದರ್ಶನಕರ್, ಉಮೇಶ್ ಜೇಗರಕಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net