ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದ ದೇವಿ ಜಾತ್ರೋತ್ಸವ ಹಾಗೂ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಸಮಾರಂಭವು ಜ.3ರಂದು ಅಂಬಾದೇವಿ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಚಿವರಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ಅಗಮಿಸಲಿದ್ದಾರೆ. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5ಗಂಟೆಗೆ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ನಡೆಯಲಿದೆ. ಬಳಿಕ ಸರಿಗಮಪ ಖ್ಯಾತಿಯ ಗಾಯಕರಾದ ಸುಪ್ರೀತ್ ಹಾಗೂ ಪೃಥ್ವಿ ಭಟ್ ಅವರಿಂದ ಸಂಗೀತ ಗಾಯನ, ನರಸಿಂಹ ಜೋಶಿ ಮತ್ತು ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ, ಸ್ಥಳೀಯ ಶಾಲಾ-ಕಾಲೇಜು ತಂಡಗಳಿಅದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಹಾಗೂ ನಾರಾಯಣಪ್ಪ ಮಾಡಸಿರವಾರ ತಂಡದಿಂದ ಅಹೋರಾತ್ರಿ ತತ್ವಪದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಾಣಿ ಬಲಿ ನಿಷೇಧ
ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಜ.2ರಿಂದ 8ರವರೆಗೆ ಜರುಗುವ ಶ್ರೀ ಅಂಬಾದೇವಿ ಜಾತ್ರೆ ವೇಳೆ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ದೇವಸ್ಥಾನದ ಆವರಣದಲ್ಲಿ ಪ್ರಾಣಿ ಹಾಗೂ ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಆದೇಶ ಹೊರಡಿಸಿದ್ದಾರೆ.