ದೇವದುರ್ಗ: ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿ ಮಿನಿವಿಧಾನಸೌಧ ಮುಂದೆ ದೇವದುರ್ಗ ಏಮ್ಸ್ ಹೋರಾಟ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಮನವಿ ಸಲ್ಲಿಸಲಾಯಿತು.
ಅಖಿಲ ಭಾರತ ವಿಜ್ಞಾನಗಳ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರು ಮಾಡುವಂತೆ ರಾಯಚೂರಿನಲ್ಲಿ ಹೋರಾಟ ಸಮಿತಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ, ಹಲವು ನಿಯೋಗಗಳು ದೆಹಲಿಗೆ ತೆರಳಿ ಮನವಿ ಪತ್ರ ಸಲ್ಲಿಸಿವೆ. ಜತೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮನವಿಗೆ ಸ್ಪಂದಿಸದೆ ನಿರ್ಲಕ್ಷೃವಹಿಸಿದೆ. ಕೇಂದ್ರದ ಮಲತಾಯಿ ಧೋರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಹೋರಾಟಕ್ಕೆ ಬೆಂಬಲಿಸಲಾಗುವುದು. ನಂಜುಂಡಪ್ಪ ಆಯೋಗ ಪ್ರಾದೇಶಿಕ ಅಸಮಾನತೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕು. ನಿರ್ಲಕ್ಷೃ ವಹಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೋರಾಟ ಸಮಿತಿ ಸಂಚಾಲಕರಾದ ಎಚ್.ಶಿವರಾಜ, ಹನುಮಂತಪ್ಪ ಮನ್ನಾಪುರಿ, ಪ್ರಮುಖರಾದ ಪ್ರಭು ಮಸರಕಲ್, ಲಿಂಗಯ್ಯ, ಉಮೇಶ, ಸಿದ್ದಲಿಂಗೇಶ್ವರ, ತಿರುಪತಿ, ದೇವೇಂದ್ರಪ್ಪ, ಸಿದ್ದಪ್ಪ, ಶರಣಬಸವ ಜಾಲಹಳ್ಳಿ, ಚಂದ್ರಶೇಖರ್, ತಿಮ್ಮಯ್ಯ ಇತರರಿದ್ದರು.