ಲಿಂಗಸುಗೂರಿನಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಅಮರೇಶ್ವರ ಗುರುಗಜದಂಡ ಸ್ವಾಮೀಜಿ, ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ಬಾಲಾಜಿ, ಉಪನ್ಯಾಸಕಿ ಡಾ.ಗಂಗಮ್ಮ ಸತ್ಯಂಪೇಟೆ, ಮಹಾಂತೇಶ ಪಾಟೀಲ್ ಮುದಗಲ್ ಇತರರಿದ್ದರು.
ಲಿಂಗಸುಗೂರು: ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರ ಕಾಯಕ ಸೇವೆ ಅತಿ ಮಹತ್ವದ್ದಾಗಿದೆ ಎಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದಲ್ಲಿ ಮಡಿವಾಳ ಸಮಾಜ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಲಿಂಗಾಯತ ಸಮಾಜದ ಒಳಪಂಗಡದವರೆಲ್ಲರೂ ಒಗ್ಗೂಡಬೇಕು. ಯಾರೂ ಕೀಳಲ್ಲ, ಮೇಲಲ್ಲ. ನಾವೆಲ್ಲರೂ ಬಸವಣ್ಣನವರ ಮಾರ್ಗದರ್ಶನ, ತತ್ವಗಳ ಅಡಿಯಲ್ಲಿ ನಡೆಯಬೇಕು. ಸಮುದಾಯ ಭವನ ನಿರ್ಮಿಸಲು 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಅಮರೇಶ್ವರ ಗುರುಗಜದಂಡ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಒಂದೊಂದು ಕಾಯಕ ಮಾಡಿಕೊಂಡು ಬಂದಿದ್ದಾರೆ. ಮಡಿವಾಳ ಮಾಚಿದೇವರು ದೇಹದ ಮೇಲಿನ ಬಟ್ಟೆಗಳನ್ನು ಮಾತ್ರ ಸ್ವಚ್ಛ ಮಾಡುತ್ತಿರಲಿಲ್ಲ. ಅವರು ವಚನಗಳಿಂದ ಮನಸ್ಸಿನ ಕಲ್ಮಶಗಳನ್ನು ತೊಳೆಯುವ ಕೆಲಸ ಮಾಡಿದರು.
ವಚನಗಳನ್ನು ಸಂರಕ್ಷಣೆ ಮಾಡುವುದರ ಜತೆಗೆ ಮನುಷ್ಯನಲ್ಲಿ ಸಮಾನತೆ ಬರಬೇಕು. ಜ್ಞಾನ ಸರ್ವರಿಗೂ ತಲುಬೇಕೆಂದು ಸಂದೇಶ ಸಾರಿದರು ಎಂದರು. ಪ್ರಮುಖರಾದ ವೀರಭದ್ರಪ್ಪ ವಕೀಲ, ಶಿವಪ್ಪ ಸಕ್ರಿ, ಸುರೇಶ ಮಡಿವಾಳ, ಶ್ರೀಕಾಂತ ಹಟ್ಟಿ, ಚಂದಪ್ಪ ಹಟ್ಟಿ, ಬಸವರಾಜ ಮುದಗಲ್, ಚಂದ್ರು ರಾಮತ್ನಾಳ ಇತರರಿದ್ದರು.