

ರಾಯಚೂರು
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ರವರ 111ನೇ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ಮಾತನಾಡಿದರು. ಅರಸು ಅವರ ಜನ್ಮದಿನಾಚರಣೆಯ ಅಂಗವಾಗಿ ಅವರ ಜೀವನ ಸಾಧನೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿವಿಧ ಶಾಲಾ-ಕಾಲೇಜುಗಳಲ್ಲಿ ಭಾಷಣ, ಪ್ರಬಂಧ ಸೇರಿದಂತೆ ಇತರೆ ವಿವಿಧ ಸ್ಪರ್ಧೆ ಆಯೋಜಿಸಬೇಕು. ಕಾರ್ಯಕ್ರಮವನ್ನು ಶಿಷ್ಟಾಚಾರದ ಅನ್ವಯ ಆಯೋಜನೆ ಮಾಡಬೇಕು. ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರಿಗೆ ಮುಂಚಿತವಾಗಿ ತಲುಪಿಸಬೇಕು. ಆ.20ರ ಬೆಳಗ್ಗೆ 9ಗಂಟೆಗೆ ನಗರದ ಮಹಿಳಾ ಸಮಾಜದಿಂದ ಜಿಲ್ಲಾ ರಂಗಮಂದಿರದವರೆಗೆ ಡಿ.ದೇವರಾಜು ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು. ಬೆಳಿಗ್ಗೆ 11ಕ್ಕೆ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಸಮಾಲೋಚಿಸಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮ ವಹಿಸಬೇಕು. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯವಯವರು ಕಡ್ಡಾಯವಾಗಿ ಈ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುನೀತಾ ಮಾತನಾಡಿ, ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗೌರವ ಮತ್ತು ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಾಯಿತ್ರಿ, ಕವಿತಾ, ಜಮುನಾ, ಆಶ್ವಿನಿ, ಇಂದಿರಾ, ಜಿ.ವೆಂಕಟೇಶ, ಸಿದ್ದರಾಜ್, ಶರಣಬಸವ ಕೆ., ದೇವಂದ್ರಪ್ಪ, ಎಮ್.ನರಸಗೌಡ ಈಡಿಗ, ಶಿವರಾಜ ಕುಂಬಾರ, ವಿಜಯಬಾಸ್ಕರ್, ರವಿ ಕುಮಾರ್, ಪ್ರಕಾಶ್ ವಕೀಲ, ಅಶೋಕ ಗುತ್ತೇದಾರ, ರಾಮಕೃಷ್ಣ, ಆಂಜಿನೇಯ ಯಾದವ್ ಸೇರಿದಂತೆ ಇತರರು ಇದ್ದರು.