ಮಸ್ಕಿಯಲ್ಲಿ ದೇವಾಂಗ ಸಂಘದಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on:
Copied
Follow Us
ಮಸ್ಕಿ: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ನಿವೃತ್ತ ಮುಖ್ಯಶಿಕ್ಷಕ ಹನುಮಂತಪ್ಪ ವೀರಾಪುರ ಹೇಳಿದರು.
ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಹಾಗೂ ದೇವಾಂಗ ಸಂಘದಿಂದ ಪಟ್ಟಣದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಧಿಸಬೇಕು ಎನ್ನುವ ಛಲವಿದ್ದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಅಗತ್ಯವಿದೆ. ಸರಿ ದಾರಿಯಲ್ಲಿ ನಡೆದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು.
ದೇವಾಂಗ ಸಮಾಜದ ಪ್ರಮುಖ ಅಮರಪ್ಪ ಕೊಪ್ಪರದ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಕೇವಲ ಒಂದೇ ಕ್ಷೇತ್ರದಲ್ಲಿ ನಾವು ಗುರುತಿಸಿಕೊಳ್ಳದೆ ಎಲ್ಲ ರಂಗದಲ್ಲಿ ನಮ್ಮವರು ಸಾಧನೆ ಮಾಡಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕೊಡಿಸಬೇಕು ಎಂದರು.
ಮಸ್ಕಿ ದೇವಾಂಗ ಮಠದ ಚಂದ್ರಮೌಳೇಶ್ವರಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕೆ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುಚ್ಚ, ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ಶಂಕ್ರಪ್ಪ ಜೋಗಿನ, ಚಿದಾನಂದ ಹಂಪರಗುಂದಿ, ಪರಮೇಶ ಕೊಪ್ಪರದ, ಶರಣಮ್ಮ ವೀರಾಪುರ ಇತರರಿದ್ದರು.