ಜಿಲ್ಲಾಡಳಿತದಿಂದ 2013 ರಲ್ಲಿ ಸಿದ್ರಾಂಪೂರ ಸೀಮಾಂತರದ ಸರ್ವೆ ನಂಬರ್ 106 ರಲ್ಲಿ 3 ಎಕರೆ ಜಮೀನನ್ನು ಸೈನಿಕರ ವಸತಿ ಮತ್ತು ಸಂಘದ ಕಟ್ಟಡಕ್ಕಾಗಿ ಅಂದಿನ ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿದ್ದರು. ಕಂದಾಯ ಮತ್ತು ಸರ್ವೆ ಇಲಾಖೆಯ ಎಲ್ಲಾ ಪ್ರಕ್ರಿಯೆಗಳು ಮುಗಿದು, ಪಹಣಿ ಕೂಡ ಸಂಘದ ಹೆಸರಿಗೆ ಬಂದಿತ್ತು. ಆದರೆ, ಆ ಜಮೀನು ಕಲ್ಲು ಬಂಡೆಗಳಿಂದ ಕೂಡಿದ್ದರಿಂದ ಮಾಜಿ ಸೈನಿಕರು ತಮ್ಮ ಸ್ವಂತ ಹಣದಿಂದ 5,75,000 ರೂ. ಖರ್ಚು ಮಾಡಿ ಭೂಮಿಯನ್ನು ಸಮತಟ್ಟು ಮಾಡಿಸಿದ್ದರು. ಆದರೆ, ದುರ್ದೈವವೆಂದರೆ 2018 ರಲ್ಲಿ ಬಂದ ಹೊಸ ಜಿಲ್ಲಾಧಿಕಾರಿಗಳು ಸಂಘಕ್ಕೆ ಯಾವುದೇ ನೋಟಿಸ್ ನೀಡದೆ, ಕನಿಷ್ಠ ಸಭೆಯನ್ನೂ ಕರೆಯದೆ ಏಕಪಕ್ಷೀಯವಾಗಿ ಈ ಜಮೀನು ಹಂಚಿಕೆಯನ್ನು ರದ್ದುಗೊಳಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿನಂತಿಸಿದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಇಷ್ಟೇ ಅಲ್ಲದೆ, 2022 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಆರ್.ಅಶೋಕ ಅರಕೇರಾದಲ್ಲಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರಾಯಚೂರು ಸೀಮಾಂತರದ ಸರ್ವೆ ನಂಬರ 928 ರಲ್ಲಿ ಮಾಜಿ ಸೈನಿಕರ ವಸತಿಗಾಗಿ ಘೋಷಿಸಲಾಗಿದ್ದ 5 ಎಕರೆ ಭೂಮಿಯ ಕಡತವೂ ಸಹ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದರೂ, ಇಂದಿಗೂ ಧೂಳು ಹಿಡಿಯುತ್ತಿದೆ.