ವಿರುಪಾಪುರ ಗ್ರಾಪಂ ಪಿಡಿಒಗೆ ಪಂಚಾಯಿತಿ ಮಾಜಿ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು. ರವಿಗೌಡ ಮಲ್ಲದಗುಡ್ಡ, ಲಕ್ಷ್ಮೀ ಬುಡ್ಡಪ್ಪ, ಗಂಗಮ್ಮ ಈರಪ್ಪ, ಸಿದ್ದಪ್ಪ, ಬಸವರಾಜ ಕವಳೆಕಾಯಿ, ಪಂಪಯ್ಯಸ್ವಾಮಿ, ಮಲ್ಲರೆಡ್ಡಿ, ಶ್ಯಾಮಲಪ್ಪ, ದುರುಗಪ್ಪ, ಬಾಲರಾಜ ಇದ್ದರು.
ಸಿಂಧನೂರು: ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ವಿರೋಧ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆ ವಿಳಂಬ ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದ ತಾಲೂಕಿನ ವಿರುಪಾಪುರ ಗ್ರಾಪಂ ಮಾಜಿ ಸದಸ್ಯರು ಪಿಡಿಒ ಪೂರ್ಣಿಮಾಗೆ ಮನವಿ ಸಲ್ಲಿಸಿದರು.
ಜಿಪಂ, ತಾಪಂ ಚುನಾವಣೆ ನಡೆಸದೆ ಐದು ವರ್ಷ ಕಳೆದಿವೆ. ಗ್ರಾಪಂ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳ ನೇಮಕ ಮಾಡಿರುವುದು ಸರಿಯಲ್ಲ. ಮೂರು ಹಂತದ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿ ಆಡಳಿತಾಧಿಕಾರಿಗಳನ್ನು ನೇಮಿಸಿ, ಮಹಿಳೆಯರಿಗೆ, ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರದಿಂದ ದೂರವಿಡುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ.
ಕೇಂದ್ರ ಸರ್ಕಾರದಿಂದ ತಾಪಂ ಹಾಗೂ ಜಿಪಂಗಳ 15ನೇ ಹಣಕಾಸಿನ ಐದು ಸಾವಿರ ಕೋಟಿ ರೂ. ಅನುದಾನ ಬರದಿರಲು ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿರುವುದೇ ಕಾರಣವಾಗಿದೆ. ಗ್ರಾಪಂಗಳಿಗೆ ಬರಬೇಕಾದ 15ನೇ ಹಣಕಾಸು ರಾಜ್ಯದ ಪಾಲು 2,100 ಕೋಟಿ ರೂ. ಪೈಕಿ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ನರೇಗಾ ಯೋಜನೆಯಡಿ ನಿಯಮಾನುಸಾರ ಮಾಡಿದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಸಾಮಗ್ರಿ ಮೊತ್ತ ಬಿಡುಗಡೆಯಾಗಿಲ್ಲ. ಸರ್ಕಾರದ ಈ ನಡೆ ಖಂಡನೀಯ. ಕೂಡಲೇ ನಿಗದಿತ ಸಮಯಕ್ಕೆ ಚುನಾವಣೆ ನಡೆಸಿ, ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.