ಕಾಯಂ ಶಿಕ್ಷಕರಿಲ್ಲದಿದ್ರೂ ಶೇ.100 ಫಲಿತಾಂಶ

ಮರದ ನೆರಳಿನಲ್ಲಿ ಪಾಠ ಕೇಳುತ್ತಿರುವ ಕೊತ್ತದೊಡ್ಡಿ ಶಾಲೆ ವಿದ್ಯಾರ್ಥಿಗಳು.
ಮರದ ನೆರಳಿನಲ್ಲಿ ಪಾಠ ಕೇಳುತ್ತಿರುವ ಕೊತ್ತದೊಡ್ಡಿ ಶಾಲೆ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿಯಲ್ಲಿ ಕೊತ್ತದೊಡ್ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ದೇವದುರ್ಗ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ತಾಲೂಕಿನ ಕೊತ್ತದೊಡ್ಡಿ ಸರ್ಕಾರಿ ಪ್ರೌಢಶಾಲೆ ಕಾಯಂ ಶಿಕ್ಷಕರು ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದು ಗಮನ ಸೆಳೆದಿದೆ. 
ಶಾಲೆಯಲ್ಲಿ ಒಬ್ಬರು ಎರವಲು ಶಿಕ್ಷಕರು, ಆರು ಅತಿಥಿ ಶಿಕ್ಷಕರ ಪರಿಶ್ರಮದ ಫಲವಾಗಿ 17ಬಾಲಕರು, 36ಬಾಲಕಿಯರು ಸೇರಿ 53 ವಿದ್ಯಾರ್ಥಿಗಳಲ್ಲಿ ಆರು ಉನ್ನತ ಶ್ರೇಣಿ, 25 ಪ್ರಥಮ, 22 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಂಗನಾಥ ಹನುಮಂತ, ನಾಗರತ್ನ ಉಮಾಪತಿ 563ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. 2024-25ನೇ ಶಾಲಿನ ಮಧ್ಯದಲ್ಲಿ ಸಾರ್ವತ್ರಿಕ ವರ್ಗಾವಣೆಯಿಂದ ಮುಖ್ಯಶಿಕ್ಷಕ ಸೇರಿ 8 ಶಿಕ್ಷಕರು ವರ್ಗಗೊಂಡರು. ಈ ಸಂದರ್ಭದಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಆಕಾಶ ಕಳಚಿಬಿದ್ದಂತಾಗಿ ಚಿಂತೆಗೀಡಾಗಿದ್ದರು. ಇದರಿಂದ ಕಳೆದವರ್ಷ ಶೇ.50 ಫಲಿತಾಂಶ ಬಂದಿತ್ತು.
 ಪಕ್ಕದ ಹೇಮನೂರು ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಪಂಪದೇವ ಯಾದವ್‌ರನ್ನು ಎರವಲು ಸೇವೆಗೆ ನಿಯೋಜಿಸಲಾಗಿತ್ತು. ಇವರು ಪಾಲಕರ ಮನವೊಲಿಸಿ ಹಾಜರಾತಿ ಕುಸಿಯದಂತೆ ನೋಡಿಕೊಂಡು ಆರು ಜನ ಅತಿಥಿ ಶಿಕ್ಷಕರನ್ನು ಒಂದೊಂದು ವಿಷಯಕ್ಕೆ ನೇಮಕ ಮಾಡಿ ವಿಶೇಷ ತರಬೇತಿ ನೀಡಿದ್ದರು.
ಇವರು ಹೆಚ್ಚುವರಿ ಕಾಳಜಿವಹಿಸಿ ಬೆಳಗ್ಗೆ ವಿಶೇಷ ತರಗತಿ, ಸಂಜೆ ಗುಂಪು ಅಧ್ಯಯನ, ಪರೀಕ್ಷೆಗೆ ಎರಡು ತಿಂಗಳು ಮುಂಚೆ ರಾತ್ರಿ ತರಗತಿ ಆರಂಭಿಸಿ ಬಾಲಕರಿಗೆ ಶಾಲೆಯಲ್ಲೇ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲದೆ ರಜೆ ದಿನಗಳಲ್ಲಿ ಪಕ್ಕದ ಗ್ರಂಥಾಲಯದಲ್ಲೇ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದ್ದರು. ಇದರ ಪರಿಣಾಮವಾಗಿ ಶೇ.100 ಫಲಿತಾಂಶ ಬಂದಿದ್ದು ಶಿಕ್ಷಕರು, ಮಕ್ಕಳ ಸಾಧನೆಗೆ ತಾಲೂಕೇ ನಿಬ್ಬೆರಗಾಗಿದೆ.
"

ಹೇಮನಾಳ ಶಾಲೆಯಲ್ಲಿ ವಿಜ್ಞಾನ ಬೋಧನೆ ಮಾಡಿಬಂದು ಇಲ್ಲಿ ಎರವಲು ಸೇವೆಯಿಂದ ಪ್ರಭಾರ ಮುಖ್ಯಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಅತಿಥಿ ಶಿಕ್ಷಕರ ಪರಿಶ್ರಮ, ಪಾಲಕರ ಸಹಕಾರದಿಂದ ಶೇ.100 ಫಲಿತಾಂಶ ಪಡೆಯಲು ಸಾಧ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net