ಲಿಂಗಸುಗೂರು: ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದ ಹಲ್ಲೆ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಜನ ಅಪರಾಧಿಗಳಿಗೆ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ.
ಗ್ರಾಪಂ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಹನುಮಂತಮ್ಮ ಹೊಸಮನಿ ಹಾಗೂ ಈ ಹತ್ತೂ ಜನರ ನಡುವೆ ಜಗಳವಾಗಿತ್ತು. ಇದೇ ದ್ವೇಷದಿಂದ 2021ರ ಫೆ.15ರಂದು ರಾತ್ರಿ ಮನೆ ಮುಂದೆ ಹನಮಂತಮ್ಮ ಹೊಸಮನಿ, ಮಕ್ಕಳಾದ ಶರಣಬಸವ ಮತ್ತು ಅಮರೇಶ ಮಲಗಿದ್ದ ವೇಳೆ ಹತ್ತು ಜನರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆದರೆ, ತೀವ್ರ ಗಾಯಗೊಂಡಿದ್ದ ಶರಣಬಸವ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದರು. ತಾಯಿ ಹನುಮಂತಮ್ಮ ನೀಡಿದ ದೂರಿನ ಮೇರೆಗೆ ಲಿಂಗಸುಗೂರು ಠಾಣೆಯಲ್ಲಿ ದಾಖಲಾದ ಪ್ರಕರಣದ ಕುರಿತು ಆಗಿನ ಸಿಪಿಐಗಳಾಗಿದ್ದ ಮಹಾಂತೇಶ ಸಜ್ಜನ ಮತ್ತು ರಮೇಶ ಕುಲಕರ್ಣಿ ತನಿಖೆ ಕೈಗೊಂಡು ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 19,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಲಿಂಗಸುಗೂರು ಸರ್ಕಾರಿ ಅಭಿಯೋಜಕ ಮಂಜುನಾಥ ಬೇರ್ಗಿ ವಾದ ಮಂಡಿಸಿದ್ದರು.