ರಾಯಚೂರು ಜಿಪಂ ಕೆಡಿಪಿ ಸಭೆ: ನೆಲದ ಮೇಲೆ ಕುಳಿತು ಸ್ಥಾಯಿ ಸಮಿತಿ ಅಧ್ಯಕ್ಷರ ಆಕ್ರೋಶ

12022021 Raichur ZP KDP meeting
Published on

ನಾಲ್ಕು ವರ್ಷದಿಂದ ನಿರ್ಮಾಣವಾಗದ ಶೌಚಗೃಹ | ಕುವೆಂಪು ಶಾಲೆ ಕಟ್ಟಡ ಗುಣಮಟ್ಟ ತನಿಖೆಗೆ ಸೂಚನೆ

ರಾಯಚೂರು: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸ್ನೇಹಿ ಶೌಚಗೃಹ ನಿರ್ಮಾಣಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಕೋಟ್ಯಂತರ ರೂ. ಅನುದಾನ ಪಡೆದು, ಈಗ ಅನುದಾನ ವಾಪಸ್ ನೀಡಲು ಮುಂದಾಗಿರುವ ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರಗಳ ಕ್ರಮವನ್ನು ಖಂಡಿಸಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು ನೆಲದ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಆದಿಮನಿ ವೀರಲಕ್ಷಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷರ ಪೀಠದ ಮುಂದಿನ ನೆಲದ ಮೇಲೆ ಕುಳಿತು ಅನುದಾನವನ್ನು ಪಡೆದು ಕಾಮಗಾರಿ ನಿರ್ವಹಿಸದೆ ಹಿಂದೆ ಸರಿಯುತ್ತಿರುವ ಏಜೆನ್ಸಿಗಳಿಂದ ಬಡ್ಡಿ ವಸೂಲಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎನ್.ಕೇಶವರೆಡ್ಡಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಜ್ಯೋತಿ ಒತ್ತಾಯಿಸಿದರು.

2016-17ನೇ ಸಾಲಿನಲ್ಲಿ ಐಸಿಡಿಎಸ್ ಯೋಜನೆಯಡಿ ಒಟ್ಟು 1,285 ಶೌಚಗೃಹ ನಿರ್ಮಾಣಕ್ಕಾಗಿ ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರಗಳಿಗೆ 1.92 ಕೋಟಿ ರೂ. ಅನುದಾನ ನೀಡಲಾಗಿದೆ. ಅಂದು ಘಟಕ ನಿರ್ಮಾಣಕ್ಕೆ 15 ಸಾವಿರ ರೂ.ನಂತೆ ಒಪ್ಪಿಗೆ ನೀಡಿ ಈಗ ಅನುದಾನ ಸಾಲುವುದಿಲ್ಲ ಎಂದು ಏಜೆನ್ಸಿಗಳು ಕಾಮಗಾರಿ ಕೈಬಿಡಲು ಮುಂದಾಗಿವೆ ಎಂದು ದೂರಿದರು.

ಸಿಇಒ ಶೇಖ್ ತನ್ವೀರ್ ಆಸೀಫ್, ಶೌಚಗೃಹ ನಿರ್ಮಾಣಕ್ಕೆ ಅನುದಾನ ಕಡಿಮೆ ಎನ್ನುವ ಕಾರಣಕ್ಕೆ 15 ಸಾವಿರ ರೂ. ಜತೆಗೆ ಹೆಚ್ಚುವರಿಯಾಗಿ ಒಂದು ಘಟಕಕ್ಕೆ ತಲಾ 4,900 ರೂ. ಬಿಡುಗಡೆ ಮಾಡಲು ಆಯಾ ಗ್ರಾ.ಪಂ.ಗಳಿಗೆ ನೀಡಲು ಕೋರಲಾಗಿದ್ದು, ಬಡ್ಡಿ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶಿವಜ್ಯೋತಿ ಮಾತನಾಡಿ, ಹೊಸಪೇಟೆ ಗ್ರಾಮದಲ್ಲಿ ಕುವೆಂಪು ಶಾಲೆ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಮೂರ‌್ನಾಲ್ಕು ವರ್ಷದಿಂದ ದುರಸ್ತಿ ಕಾಮಗಾರಿ ಆರಂಭಿಸಲಾಗಿಲ್ಲ ಎಂದು ದೂರಿದಾಗ. ಐದು ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡ ದುರಸ್ತಿ ಮಾಡಲು ಸಾಧ್ಯವಿಲ್ಲ. ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕಾಗಿದೆ. ಈ ಬಗ್ಗೆ ವರದಿ ಕೇಳಲಾಗಿದೆ ಎಂದು ನಿರ್ಮಿತಿ ಕೇಂದ್ರ ಅಧಿಕಾರಿ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net