

ರಾಯಚೂರು: ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಹಾಗೂ ಪ್ರತಿ ಕ್ವಿಂಟಾಲ್ ಹತ್ತಿಗೆ 10 ಸಾವಿರ ರೂ. ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ(ಎಐಕೆಕೆಎಂಎಸ್) ವತಿಯಿಂದ ನಗರದ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹತ್ತಿಯನ್ನು ಬೆಳೆಯಲಾಗಿದ್ದು, ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಹತ್ತಿ ಬೆಳೆಯ ಇಳುವರಿ ಕಡಿಮಾಯಾಗಿದೆ. ಎಕರೆಗೆ 6 ರಿಂದ 8 ಕ್ವಿಂಟಾಲ್ ಹತ್ತಿ ಇಳುವರಿ ಬರುತ್ತಿದ್ದು, ಒಂದು ಎಕರೆಗೆ 40 ಸಾವಿರದವರೆಗೆ ರೈತರು ಖರ್ಚು ಮಾಡಿದ್ದಾರೆ. ಇದೀಗ ಇಳುವರಿ ಕಡಿಮೆಯಾಗಿ ಮೊದಲೇ ಸಂಕಷ್ಟದಲ್ಲಿರುವ ರೈತರಿಂದ ಕನಿಷ್ಟ ದರದಲ್ಲಿ ಹತ್ತಿ ಖರೀದಿ ಮಾಡಲಾಗುತ್ತಿದ್ದು, ಕಡಿಮೆ ಇಳುವರಿಯಿಂದ ರೈತರು ಕಂಗಾಲಾಗಿದ್ದಾರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಹತ್ತು ಸಾವಿರ ಪ್ರತಿ ಕ್ವಿಂಟಾಲ್‌ನಂತೆ ಖರೀದಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಕೂಡಲೇ ಜಿಲ್ಲಾಡಳಿತ, ವ್ಯಪಾರಸ್ಥರು, ರೈತರು ಹಾಗೂ ಅಧಿಕಾರಿಗಳ ಸಭೆ ಕರೆದು ಹತ್ತಿಯನ್ನು ಸೂಕ್ತ ಬೆಲೆಯಲ್ಲಿ ಖರೀದಿ ಮಾಡಲು ಚರ್ಚಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲನಗೌಡ, ಚನ್ನಬಸವ ಜಾನೇಕಲ್, ದುರ್ಗಣ್ಣ, ಶರಣಪ್ಪ, ಆದೆಪ್ಪ, ವೀರೇಶ, ರಿಯಾನುದ್ದಿನ್, ಹುಲಿಗೆಪ್ಪ, ದುರ್ಗೇಶ, ಹುಲಿಗೇಶ ಸೇರಿದಂತೆ ಇತರರಿದ್ದರು.