

ಶರಣ ಹಾವಿನಾಳ ಕಲ್ಲಯ್ಯ ಕೃತಿ ಲೋಕಾರ್ಪಣೆ | ವಚನಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಿದೆ
ರಾಯಚೂರು: ಅಧ್ಯಾತ್ಮದ ಸ್ಪರ್ಶವಿರುವ ಸಾಹಿತ್ಯ ಬಹುಕಾಲ ಬಾಳುತ್ತದೆ. ಇದಕ್ಕೆ ಶರಣ, ದಾಸ ಮತ್ತು ತತ್ವಪದ ಸಾಹಿತ್ಯಗಳು ಸಾಕ್ಷಿ. ಈ ಸಾಹಿತ್ಯಗಳು ಸಮಾಜಕ್ಕೆ ತಳಹದಿಯಾಗಿ ನಿಲ್ಲುವ ಶಕ್ತಿ ಹೊಂದಿವೆ ಎಂದು ಸಾಹಿತಿ, ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಏರ್ಪಡಿಸಿದ್ದ ಡಾ.ಶಾಂತಲಾ ಮುಕ್ಕುಂದಿಮಠ ಅವರ‘ ಶರಣ ಹಾವಿನಾಳ ಕಲ್ಲಯ್ಯ’ ಸಂಶೋಧನಾ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸಿನ ಬೇಗುದಿಯನ್ನು ದೂರ ಮಾಡುವ ಶಕ್ತಿ ಶರಣ ಮತ್ತು ದಾಸ ಸಾಹಿತ್ಯಕ್ಕಿದೆ. ಕಟ್ಟುಪಾಡುಗಳಿಲ್ಲದೆ ಶರಣರು ಅನುಭವ ಮಂಟಪವನ್ನು ಕಟ್ಟಿ, ಹುದ್ದೆಗಳನ್ನು ಬದಿಗಿಟ್ಟು ಸಮಾಜದಲ್ಲಿ ದೊಡ್ಡ ಪರಿವರ್ತನೆಗೆ ಕಾರಣರಾದರು. ಮನುಷ್ಯನಿಗೆ ಕೌತುಕ, ಜಗತ್ತು ನೋಡುವ ವಿಸ್ಮಯತೆ ಇದ್ದಾಗ ಮಾತ್ರ ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಶರಣರು ನುಡಿದಂತೆ ನಡೆದು ತೋರಿಸಿದ್ದರಿಂದ ವಚನ ಸಾಹಿತ್ಯಕ್ಕೆ ಮಂತ್ರ ಶಕ್ತಿಯಿದೆ. ಕೃತಿ ರಚನೆಕಾರರು ಬಹಳಷ್ಟು ಸಂಶೋಧನೆ ನಡೆಸುವ ಮೂಲಕ ಹಾವಿನಾಳ ಕಲ್ಲಯ್ಯ ಶರಣರ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಕೃತಿಯಲ್ಲಿ ಕಲ್ಲಯ್ಯರ ವಚನಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಿದೆ ಎಂದರು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ವೀರಹನುಮಾನ, ಹಲವಾರು ಶರಣರು ಮತ್ತು ಅವರ ವಚನಗಳು ತೆರೆಮರೆಯಲ್ಲಿವೆ. ಅವರ ಜೀವನ ಮತ್ತು ವಚನಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ. ಶರಣರಿಗೆ ಜಾತಿ ಮುಖ್ಯವಾಗಿರಲಿಲ್ಲ. ಸಮಾನತೆ ವಚನಗಳ ಮೂಲ ನೆಲೆಯಾಗಿತ್ತು. ಅಫಘಾನಿಸ್ತಾನದಲ್ಲಿದ್ದ ತಕ್ಷಶಿಲೆ ಮತ್ತು ನಳಂದಾ ವಿದ್ಯಾಲಯದಲ್ಲಿದ್ದ ಜ್ಞಾನ ಭಂಡಾರವನ್ನು ದಾಳಿಯಿಂದಾಗಿ ಕಳೆದುಕೊಂಡಂತೆ 12ನೇ ಶತಮಾನದಲ್ಲಿ ಶರಣರ ಮೇಲಿನ ದಾಳಿಯಿಂದಾಗಿ ವಚನ ಸಾಹಿತ್ಯದ ಭಂಡಾರವನ್ನು ಕಳೆದುಕೊಂಡಿದ್ದೇವೆ. ಅವುಗಳನ್ನು ಪತ್ತೆಹಚ್ಚುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಭೀಮನಗೌಡ ಇಟಗಿ, ಡಾ.ಜೆ.ಎಲ್.ಈರಣ್ಣ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ, ಪ್ರಕಾಶಕ ಭೀಮಸೇನ ಬಡಿಗೇರ ಉಪಸ್ಥಿತರಿದ್ದರು.