ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಿರಿ: ಸಿಐಟಿಯು ಪ್ರತಿಭಟನೆ

IMG-20240921-WA0013
Published on

ರಾಯಚೂರು: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ನಗರದ ಡಿಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕೋಲ್ಕತ್ತಾ ವೈದ್ಯೆಯ ಮೇಲಿನ ದೌಜ್ಯನ್ಯ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಮತ್ತು ತ್ವರಿತವಾಗಿ ವಿಚಾರಣೆ ನಡೆಸಿ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ದೇಶದಲ್ಲಿ ಎಲ್ಲಿಯಾದರೂ ಅತ್ಯಾಚಾರ, ಲೈಂಗಿಕ ಹಿಂಸೆ ಪ್ರಕರಣಗಳನ್ನು ತ್ವರಿತವಾಗಿ ನ್ಯಾಯಾಲಯ ವಿಚಾರಣೆಗೆ ಹಾಜರುಪಡಿಸಬೇಕೆಂದು ಆಗ್ರಹಿಸಲಾಯಿತು.

ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಗಮನಹರಿಸಿ ಅವರ ಪುನರ್ವಸತಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಎಲ್ಲ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆಧ್ಯತೆ ನೀಡುವುದರ ಜತೆಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕು. ನಿರ್ಭಯ ನಿಧಿಯನ್ನು ಹೆಚ್ಚಳ ಮಾಡಿ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಬಳಸಲು ಸೂಚನೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಎಚ್.ಪದ್ಮಾ, ಡಿ.ಎಸ್ ಶರಣಬಸವ, ಗೋಕುರಮ್ಮ, ಶರಣಮ್ಮ, ಗಂಗಮ್ಮ, ರಂಗಮ್ಮ, ಇಂದಿರಾ, ಕೆ.ಜಿ ವೀರೇಶ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net