ವಕ್ಫ್‌ನಿಂದ ಭೂಕಬಳಿಕೆ: ಜಂಟಿ ಸಲಹಾ ಸಮಿತಿಗೆ ವರದಿ ಸಲ್ಲಿಕೆ: ಬಸನಗೌಡ ಪಾಟೀಲ್ ಯತ್ನಾಳ

IMG_20241127_215158
Published on

ರಾಯಚೂರು: ರೈತರ, ಮಠಗಳ ಹಾಗೂ ಸರ್ಕಾರಿ ಭೂಮಿಗಳನ್ನು ವಕ್ಫ್ ಆಸ್ತಿಯೆಂದು ನೋಟಿಸ್ ನೀಡಿ, ಇದೀಗ ನೋಟಿಸ್ ವಾಪಸ್ ಪಡೆಯುವಂತೆ ನೀಡಿರುವ ಸಿಎಂ ಸಿದ್ದರಾಮಯ್ಯ ಆದೇಶ ಕಸದಬುಟ್ಟಿ ಸೇರಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಭೂಕಬಳಿಕೆ ವಿರೋಧಿ ಜನ ಜಾಗೃತಿ ಹೋರಾಟದ ವೇದಿಕೆಯಲ್ಲಿ ಬುಧವಾರ ಮಾತನಾಡಿ, ವಕ್ಪ್ ಮಂಡಳಿಗಳಲ್ಲಿ ಈಗಿರುವಂತಹ ದಾಖಲೆಗಳನ್ನು ಹೊರತುಪಡಿಸಿ ಇನ್ನೂ ಬೇರೆ ದಾಖಲೆಗಳಿವೆ. ಅವುಗಳಲ್ಲಿ ರಾಜ್ಯದ ಡಿಸಿ, ಕಚೇರಿ, ಡಿಸಿ, ಎಸ್ಪಿ ಮನೆಗಳೂ ಕೂಡ ವಕ್ಫ್ ಆಸ್ತಿಯೆಂದಿದೆ. ಧಾರ್ಮಿಕ ಕ್ಷೇತ್ರಗಳು, ಸರ್ಕಾರಿ ಜಮೀನುಗಳನ್ನು ವಕ್ಫ್ ಮಂಡಳಿಯಿಂದ ಕಬಳಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಕೇಂದ್ರದ ಜಂಟಿ ಸಲಹಾ ಸಮಿತಿಗೆ ಕಳಿಸಲಾಗುವುದು ಎಂದರು.

ಜನರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದು, ಪಕ್ಷದ ಹಿರಿಯರನ್ನು ಕರೆದರೇ ಮೇಲಿಂದ ಆಡರ್ರ್ರ್ ಆಗಿದೆ. ಬರಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಈಗ ಯಾವ ಎಲೆಕ್ಷನ್ ಇಲ್ಲ ನಮಗೆ ಸುಖಾ ಸುಮ್ಮನೇ ಹೋರಾಟ ಮಾಡಲು ಹುಚ್ಚು ಹಿಡಿದಿಲ್ಲ. ದೇಶದಲ್ಲಿ ಇಷ್ಟು ದೊಡ್ಡ ಹಗರಣ ನಡೆದಿದೆ ಎಂದರು.

ಶಾಸಕ ಜಮೀರ್ ಅಹ್ಮದ್ ಖಾನ್ ಎಲ್ಲವನ್ನೂ ವಕ್ಫ್ ಆಸ್ತಿಯೆಂದು ಹೇಳುತ್ತಿದ್ದು, ರಾಜ್ಯವನ್ನು ಪಂಚರ್ ಅಂಗಡಿ ಎಂದು ಕೊಂಡಿದ್ದಾನೆ. ರಾಜ್ಯದ ಮಂದಿರಗಳು, ಮಠಮಾನ್ಯಗಳು ಯಾರಪ್ಪನ ಆಸ್ತಿಯೂ ಅಲ್ಲ ಇದು ಭಾರತದ ಸಂಪತ್ತಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತದೆ ಎಂಬ ಅಪವಾದವಿದೆ. ಇಂತಹ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಸುಳ್ಳು ಮಾತುಗಳು ಹಾಗೂ ಅವರ ನಾಟಕ ಕಂಪನಿ ಬಂದ್ ಆಗಲಿದೆ. ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 ಕಾನೂನನ್ನು ನರೇಂದ್ರ ಮೋದಿಯವರು ತೆಗೆಯದೇ ಹೋಗಿದ್ದರೇ ಅಲ್ಲಿ ರಾಜಕೀಯ ಮೀಸಲಾತಿ ಇರುತ್ತಿರಲಿಲ್ಲ ಮತ್ತು ಚುನಾವಣೆಗಳೇ ನಡೆಯುತ್ತಿರಲಿಲ್ಲ ಎಂದರು.

ಸಂವಿಧಾನದಲ್ಲಿ ವಕ್ಫ್ ಎಂಬ ಪದವೇ ಇಲ್ಲ ಎಂಬುವುದನ್ನು ಕಾಂಗ್ರೆಸ್ಸಿಗರು ಮೊದಲು ಅರಿತುಕೊಳ್ಳಬೇಕು. ವಕ್ಪ್ ಹಠಾವೋ ದೇಶ ಬಚಾವೋ ಎಂಬ ಘೋಷವಾಕ್ಯದಡಿ ವಕ್ಫ್ ಭೂಕಬಳಿಕೆ ವಿರುದ್ಧ ಹೋರಾಟ ಆರಂಭಿಸಲಾಗಿದೆ ಎಂದು ತಿಳಸಿದರು.

ಭಾರತ ಮತ್ತು ಪಾಕಿಸ್ಥಾನ ಧ್ವಿರಾಷ್ಟ್ರ ಮಾಡಲು ಡಾ.ಬಿ.ಆರ್ ಅಂಬೇಡ್ಕರ್ ಅವರ ವಿರೋಧವಿತ್ತು. ಒಂದು ವೇಳೆ ಪ್ರತ್ಯೇಕ ರಾಷ್ಟ್ರಗಳಾದರೇ ಇಲ್ಲಿನ ಮುಸ್ಲಿಮರನ್ನು ಪಾಕಿಸ್ಥಾನಕ್ಕೆ ಮತ್ತು ಪಾಕಿಸ್ಥಾನದಲ್ಲಿರುವ ಹಿಂದುಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು ಎಂದಿದ್ದರು. ಆದರೆ ಹೀಗೆ ಮಾಡದ ಕಾಂಗ್ರೆಸ್ ಅಂಬೇಡ್ಕರ್ ಮರಣ ಹೊಂದಿದಾಗ ಅವರಿಗೆ ಅಂತ್ಯ ಸಂಸ್ಕಾರಕ್ಕೆ ಜಾಗವನ್ನೂ ನೀಡಲಿಲ್ಲ. ಇದೀಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಈ ಹೋರಾಟಕ್ಕೆ ಕಾರ್ಯಕರ್ತರು, ಪಕ್ಷದ ಪ್ರಮುಖರು ಬಾರದಂತೆ ಕೆಲವರು ಎಚ್ಚರಿಸಿದ್ದು, ನಮ್ಮನ್ನು ಬೆಂಗಳೂರಿನಲ್ಲಿ ಕೂತೋರು ಲೀಡರ್ ಮಾಡಿಲ್ಲ. ನಾವು ಯಾರಿಗೂ ಅಪ್ಪಾಜಿ ಅನ್ನೋದಿಲ್ಲ. ಕಷ್ಟದಿಂದ ಮುಂದೆ ಬಂದೋರು. ಜನರ ಆಶಿರ್ವಾದದಿಂದ ಗೆದ್ದಿದ್ದೇವೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಪ್ರಸ್ತುತ ಇಡೀ ವಿಜಯಪುರವನ್ನು ವಕ್ಫ್ ಆಸ್ತಿ ಎಂದು ಬರೆದುಕೊಳ್ಳಲಾಗಿದೆ. ರಾಯಚೂರಿಗೂ ಈ ಸ್ಥಿತಿ ಬರಬಹುದು. ಆದ್ದರಿಂದ ಪ್ರತಿಯೊಬ್ಬರು ಎಚ್ಚರದಿಂದ ಇರಬೇಕು ಮತ್ತು ತಮ್ಮ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ.ಹರೀಶ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಪ್ರಮುಖರಾದ ಎನ್.ಆರ್.ಸಂತೋಷ, ರಮಾನಂದ ಯಾದವ್, ಆಂಜನೇಯ್ಯ, ನರಸಪ್ಪ, ಕೊಟ್ರೇಶಪ್ಪ ಕೋರಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net