ಯೋಜನೆ ತಲುಪಿಸುವಲ್ಲಿ ನಿರ್ಲಕ್ಷ್ಯ

151122 Maski Devadasi Appeal
ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಸರ್ವೇ ನಂ.197/2ರಲ್ಲಿ 9 ಗುಂಟೆ ಜಾಗವನ್ನು ವಿಮುಕ್ತ ದೇವದಾಸಿಯರಿಗೆ ಹಂಚುವಂತೆ ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ್ ಷಣ್ಮಖಪ್ಪಗೆ ಮನವಿ ಸಲ್ಲಿಸಲಾಯಿತು.
Published on

ರಾಯಚೂರು: ವಿಮುಕ್ತ ದೇವದಾಸಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ದಲಿತ ಸಮರ ಸೇನೆ ಮತ್ತು ಸ್ಲಂ ಜನರ ಕ್ರಿಯಾ ವೇದಿಕೆ ಜಿಲ್ಲಾಧ್ಯಕ್ಷ ನೀಲಕಂಠ ಆರೋಪಿಸಿದರು.

ವಿಮುಕ್ತ ದೇವದಾಸಿಯರಿಗೆ ಮಾಶಾಸನ, ಸಬ್ಸಿಡಿ, ನಿವೇಶನ, ವಸತಿ ಮತ್ತು ಮಕ್ಕಳ ಮದುವೆಗೆ ಘೋಷಿಸಿರುವ ಪ್ರೋತ್ಸಾಹ ಧನ ಅಧಿಕಾರಿಗಳ ನಿರ್ಲಕ್ಷೃದಿಂದ ಸಿಗದಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಹಿಳೆಯರು ಸೌಲಭ್ಯಕ್ಕಾಗಿ ಕಚೇರಿಗೆ ಅಲೆದಾಡುವಂತಾಗಿದ್ದು, ಅಧಿಕಾರಿಗಳು ಮಹಿಳೆಯರೊಂದಿಗೆ ಸಮರ್ಪಕ ರೀತಿಯಲ್ಲಿ ವರ್ತಿಸುತ್ತಿಲ್ಲ. ಈ ಕುರಿತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ವಿಶೇಷ ಘಟಕ ಯೋಜನೆಯಡಿ ವಿಮುಕ್ತ ದೇವದಾಸಿ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಿ ವಸತಿ ನಿರ್ಮಿಸುವಂತೆ 2014-15ನೇ ಸಾಲಿನಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಇದುವರೆಗೂ ಸೌಲಭ್ಯ ದೊರೆತಿಲ್ಲ. ವಿಮುಕ್ತ ದೇವದಾಸಿಯರ ಸರ್ವೇಯಲ್ಲಿ ಬಿಟ್ಟು ಹೋದವರ ಹೆಸರು ಸೇರಿಸಲು ಒತ್ತಾಯಿಸಲಾಗಿದ್ದರೂ ಕ್ರಮ ಜರುಗಿಸಲಾಗಿಲ್ಲ.

ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಿ ಮಹಿಳೆಯರಿಗೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಬೇಕು. ನಿರ್ಲಕ್ಷೃ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿಮುಕ್ತ ದೇವದಾಸಿಯರಾದ ನಿಂಗಮ್ಮ, ಚೌಡಮ್ಮ, ಮರಿಯಮ್ಮ, ರೇಣುಕಾ, ಹುಲಿಗೆಮ್ಮ ಉಪಸ್ಥಿತರಿದ್ದರು.

ವಿಮುಕ್ತ ದೇವದಾಸಿಯರಿಗೆ ನಿವೇಶನ ನೀಡಿ
ಮಸ್ಕಿ: ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಸರ್ವೇ ನಂ.197/2 ರಲ್ಲಿ 9 ಗುಂಟೆ ಜಾಗವನ್ನು ವಿಮುಕ್ತ ದೇವದಾಸಿಯರಿಗೆ ವಿತರಿಸಬೇಕೆಂದು ಒತ್ತಾಯಿಸಿ ಕರವೇ ನೇತೃತ್ವದಲ್ಲಿ ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಗ್ರೇಡ್ 2 ತಹಸೀಲ್ದಾರ್ ಷಣ್ಮುಖಪ್ಪಗೆ ಸೋಮವಾರ ಮನವಿ ಸಲ್ಲಿಸಿದರು. 192/7 ಸರ್ಕಾರಿ ಜಮೀನಿನಲ್ಲಿ 9 ಗುಂಟೆ ಜಾಗವಿದೆ. ಆ ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ವಿಮುಕ್ತ ದೇವದಾಸಿಯರಿಗೆ ನೀಡಬೇಕು. ತಾಲೂಕು ಆಡಳಿತ ಕೂಡಲೇ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ದುರ್ಗರಾಜ ವಟಗಲ್, ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಪ್ರಮುಖರಾದ ಕೆಂಚಮ್ಮ, ಅಮರಮ್ಮ, ದ್ಯಾವಮ್ಮ, ಶ್ರೀದೇವಿ, ಬಾಳಮ್ಮ, ಬಸಮ್ಮ, ಹುಲಿಗೆಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net