

ರಾಯಚೂರು: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿಮುಕ್ತ ದೇವದಾಸಿ ಮಹಿಳೆಯರ ಮಾಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪ್ರಸ್ತುತ ನೀಡಲಾಗುತ್ತಿರುವ 1,500 ರೂ. ಮಾಸಾಶನ ಸಾಕಾಗುತ್ತಿಲ್ಲ. ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ಮಕ್ಕಳು ವಿವಾಹವಾದಲ್ಲಿ 5 ಲಕ್ಷ ರೂ. ಪ್ರೋತ್ಸಾಹ ನೀಡಬೇಕು. ಮದುವೆ ವಿಚಾರದಲ್ಲಿ ಷರತ್ತು ವಿಧಿಸಬಾರದು. ಬರಗಾಲ, ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ದೇವದಾಸಿ ಮಹಿಳೆಯರ, ಮಕ್ಕಳ ಸಾಲ ಮನ್ನಾ ಮಾಡಬೇಕು.
ದೇವದಾಸಿಯರು ಮತ್ತು ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನು, ನಿವೇಶನ ರಹಿತರಿಗೆ ನಿವೇಶನ, ಕನಿಷ್ಠ 7 ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ಕಟ್ಟಿಸಿಕೊಡಬೇಕು. ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಗೌರವ ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಧಿಕಾರಿಗಳಾದ ಹುಲಿಗೆಮ್ಮ, ಅಯ್ಯಮ್ಮ, ಕಮಲಮ್ಮ, ರೇಣುಕಮ್ಮ, ಮುತ್ತಮ್ಮ, ಸರೋಜಮ್ಮ, ಜೆ.ತಾಯಮ್ಮ, ಹೊಸೂರಮ್ಮ, ನರಸಿಂಹಪ್ಪ, ಪರಶುರಾಮ, ಯಲ್ಲಪ್ಪ ಪಾಲ್ಗೊಂಡಿದ್ದರು.