

ರಾಯಚೂರು: ವೇತನ ಶ್ರೇಣಿ, ಮೂಲಭೂತ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಗುರುವಾರ ನಗರದ ತಹಸೀಲ್ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಯಿತು.
ಸರ್ಕಾರದಿಂದ ಅಭಿವೃದ್ಧಿಪಡಿಸಲಾದ ಎಲ್ಲ ವೆಬ್ ಹಾಗೂ ಮೊಬೈಲ್ ತಂತ್ರಾಂಶಗಳ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿಯನ್ನು ನಿಗದಿಪಡಸಿ ಆದೇಶ ಹೊರಡಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದಲ್ಲಿ ಈವರೆಗೆ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಮೊಬೈಲ್, ಸಿಮ್ ಹಾಗೂ ಡೇಟಾ ಸೌಲಭ್ಯವನ್ನು ಒದಗಿಸಬೇಕು. ಲ್ಯಾಪ್‌ಟಾಪ್ ಪ್ರಿಂಟರ್ ಹಾಗೂ ಸ್ಕಾೃನರ್‌ಗಳನ್ನು ನೀಡಬೇಕು. ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್‌ಜಿಲ್ಲಾ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿಗಳನ್ನು ರಚಿಸಬೇಕು.
ಪ್ರಯಾಣ ಭತ್ಯೆ ದರವನ್ನು 500 ರೂ.ಗಳಿಂದ 3000 ರೂ.ಗಳವರೆಗೆ ಹೆಚ್ಚಳ ಮಾಡಬೇಕು. ಕೆಲಸದ ಮುನ್ನ ಹಾಗೂ ನಂತರ ನಡೆಸಲಾಗುವ ಎಲ್ಲ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಇನ್ನಿತರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.
ಬೇಡಿಕೆಗಳು ಈಡೇರುವ ವರೆಗೆ ಕಂದಾಯ ಇಲಾಖೆಯಲ್ಲಿ ನಿರ್ವಹಿಸುವ ಎಲ್ಲ ಬಗೆಯ ಮೊಬೈಲ್ ತಂತ್ರಾಂಶ, ಹಾಗೂ ವೆಬ್ ಅಪ್ಲಿಕೇಷನ್‌ಗಳ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ಮುಂದುವರೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಂದ್ರ ಕುಮಾರ್, ಮಹಿಬೂಬಿ, ನಲ್ಲಾರೆಡ್ಡಿ, ಹಸನ, ಮನ್ಸೂರ್, ಶ್ರೀನಿವಾಸ, ನಾಗರತ್ನ, ನೀಲವೇಣಿ, ಸುನಿತಾ, ಶ್ವೇತಾ, ಭಾರತಿ, ಯಂಕಮ್ಮ, ವಿಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.