ಒಳ ಮಿಸಲಾತಿಗೆ ಸುಪ್ರಿಂ ಅಸ್ತು: ಸಂಭ್ರಮಾಚರಣೆ

VIJAYOTSAVA
ರಾಯಚೂರಿನ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿ ದಲಿತಪರ ಸಂಘಟನೆಗಳ ಮುಖಂಡರು ವಿವಿಧ ಪಕ್ಷದ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಶಾಸಕ ಡಾ.ಶಿವರಾಜ್ ಪಾಟೀಲ್, ಪ್ರಮುಖರಾದ ಅಂಬಣ್ಣ ಅರೋಲಿಕರ್, ರವೀಂದ್ರನಾಥ ಪಟ್ಟಿ, ಎಂ.ವಿರುಪಾಕ್ಷಿ, ಎನ್.ಶಂಕ್ರಪ್ಪ, ಪ್ರಮುಖರಾದ ರವೀಂದ್ರ ಜಲ್ದಾರ್, ನರಸಿಂಹ ನಾಯಕ, ತಿಮಪ್ಪ ನಾಯಕ ಇದ್ದರು.
Published on

ರಾಯಚೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿ ವಿವಿಧ ದಲಿತಪರ ಸಂಘಟನೆಗಳಿಂದ ನಗರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.

ಇದೇ ವೇಳೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಅತಿ ಹಿಂದುಳಿದವರಿಗೆ ಒಳ ಮೀಸಲಾತಿಯನ್ನು ನೀಡುವ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡುವ ತೀರ್ಪಿನಿಂದ ಇಂದು ಪರಿಶಿಷ್ಟ ಜಾತಿಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಹೇಳಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮುಖಂಡ ಅಂಬಣ್ಣ ಅರೋಲಿಕರ್ ಮಾತನಾಡಿ, ಒಳ ಮೀಸಲಾತಿ ಹೋರಾಟ ಕೇವಲ ಮಾದಿಗ ಸಮುದಾಯದಲ್ಲ ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳ ಹೋರಾಟವಾಗಿತ್ತು ಇದೀಗ ಹೋರಾಟಕ್ಕೆ ಪ್ರತಿಲ ಸಿಕ್ಕಂತಾಗಿದೆ ಎಂದರು.
ಚಲವಾದಿ ಸಮಾಜದ ಪ್ರಮುಖ ರವೀಂದ್ರನಾಥ ಪಟ್ಟಿ ಮಾತನಾಡಿ, ಜಿಲ್ಲೆಯ ಮಾದಿಗ ಸಮುದಾಯಕ್ಕೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಕಳೆದ 30 ವರ್ಷಗಳಿಂದ ನಡೆದ ಒಳಮೀಸಲಾತಿ ಹೋರಾಟಕ್ಕೆ ಸಂದ ಜಯವಾಗಿದೆ. ಸಂಘಟನೆಯ ನಿರಂತರ ಹೋರಾಟಕ್ಕೆ ಮನ್ನಣೆ ನೀಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ, ಪ್ರಮುಖರಾದ ರವೀಂದ್ರ ಜಲ್ದಾರ್, ನರಸಿಂಹ ನಾಯಕ, ತಿಮಪ್ಪ ನಾಯಕ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net