ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ಅಕ್ರಮ

06022023 chamras mali patil bettadur
Published on

ರಾಯಚೂರು: ವಿಜಯನಗರ ಕಾಲುವೆ ಆಧುನೀಕರಣ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತನಿಖೆ ವಿಳಂಬಗತಿಯಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರ ಕುರಿತು ಶೀಘ್ರ ಕ್ರಮಕೈಗೊಳ್ಳದಿದ್ದಲ್ಲಿ ಗಿಲ್ಲೆಸುಗೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಟೆಂಡರ್ ಷರತ್ತು ಉಲ್ಲಂಘಿಸಿ ಅವೈಜ್ಞಾನಿಕ ಕಾಮಗಾರಿ ನಿರ್ವಹಿಸಲಾಗಿದೆ. ಕಾಮಗಾರಿ ಪರಿಶೀಲನೆ ನಡೆಸಿದ ಮೂರನೇ ತಂಡವೂ ಇದರಲ್ಲಿ ಶಾಮೀಲಾಗಿದೆ. ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಯನ್ನು 425 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಮರ್ಪಕ ಕಾಮಗಾರಿ ನಿರ್ವಹಣೆ ಮಾಡದಿದ್ದರೂ 371 ಕೋಟಿ ರೂ. ಖರ್ಚು ಎಂದು ತೋರಿಸಲಾಗಿದೆ ಎಂದು ದೂರಿದರು.

ತಾಲೂಕಿನ ರಾಜೋಳ್ಳಿ, ಬಿ.ಹನುಮಾಪುರ, ಬಿಚ್ಚಾಲಿ ಕ್ಯಾಂಪ್ ಸೇರಿ 9 ಸಾವಿರ ಎಕರೆ ಪ್ರದೇಶಕ್ಕೆ ನಿರೂಣಿಸುವ ಯೋಜನೆ ಹಾಗೂ ಬಳ್ಳಾರಿ ಜಿಲ್ಲೆ ಸಿರಗುಪ್ಪದ ದೇಶನೂರು ಬಳಿ 26 ಕೋಟಿ ರೂ. ಕಾಮಗಾರಿ ನಿರ್ವಹಿಸಲಾಗಿದೆ. ನದಿಗಿಂತ ಎತ್ತರದಲ್ಲಿ ಡೈವರ್ಟ್ ನಿರ್ಮಿಸಿದ್ದು, ಪ್ರವಾಹ ಬಂದಾಗ ಮಾತ್ರ ಕಾಲುವೆಯಲ್ಲಿ ನೀರು ಹರಿಯುವಂತಹ ಸ್ಥಿತಿಯಿದೆ.

ದೂರು ನೀಡಿದ ಬಳಿಕ ಗುತ್ತಿಗೆ ಪಡೆದಿರುವ ಆರ್.ಎನ್.ಶೆಟ್ಟಿ ಸಂಸ್ಥೆ 1.84 ಕೋಟಿ ರೂಪಾಯಿಯನ್ನು ಕಾಮಗಾರಿ ಮಾಡದೇ ಇರುವುದಕ್ಕೆ ನೀರಾವರಿ ನಿಗಮಕ್ಕೆ ವಾಪಸ್ ಮಾಡಿರುವುದು ಭ್ರಷ್ಟಾಚಾರಕ್ಕೆ ನಿದರ್ಶನವಾಗಿದೆ ಎಂದು ಚಾಮರಸ ಮಾಲಿಪಾಟೀಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net