

ರಾಯಚೂರು: ಸಂಪೂರ್ಣ ಲಾಕ್‌ಡೌನ್ ಇದ್ದರೂ ಜನ ಅನಗತ್ಯವಾಗಿ ರಸ್ತೆಗಿಳಿಯುವುದು ಮುಂದುವರಿದ್ದು, ಪೊಲೀಸರು ಪ್ರಮುಖ ವೃತ್ತಗಳಲ್ಲಿ ಶುಕ್ರವಾರ ವಾಹನ ತಡೆದು ದಂಡ ವಿಧಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ವತಃ ವಾಹನಗಳ ತಪಾಸಣೆ ನಡೆಸುವ ಮೂಲಕ ಅನಗತ್ಯ ಓಡಾಡುವ ವಾಹನಗಳನ್ನು ವಶಕ್ಕೆ ಪಡೆಯುವಂತೆ ಸಿಬ್ಬಂದಿಗೆ ಸೂಚಿಸಿದರು. ವಿನಾಕಾರಣ ರಸ್ತೆಗಿಳಿಯದಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ನಗರದಲ್ಲಿ ಕೂಡು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಬಹುತೇಕರು ಆಸ್ಪತ್ರೆ ಹೆಸರೇಳಿ ಓಡಾಡುತ್ತಿದ್ದಾರೆ. ಸೂಕ್ತ ದಾಖಲೆಗಳಿಲ್ಲದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿ, ವಾಹನಗಳನ್ನು ವಶಕ್ಕೆ ಪಡೆದುಕೊಂಡರು.