

ರಾಯಚೂರು: ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ನಿರಂತರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಹಳ್ಳಿಗಳ ಸಂಪರ್ಕ ಕಡಿತವಾಗಿ ಅವಾಂತರ ಸೃಷ್ಠಿಯಾಗಿದೆ.
ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ. ದೇವದುರ್ಗ, ಸಿರವಾರ, ಮಾನವಿ, ರಾಯಚೂರು ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಸಿರವಾರ ತಾಲೂಕಿನಲ್ಲಿ ಮಂಗಳವಾರ 0.8 ಮಿ.ಮೀ ನಷ್ಟು ವಾಡಿಕೆಯ ಮಳೆಯಾಗಬೇಕಿದ್ದು, 11.5 ಮಿ.ಮೀ ಮಳೆಯಾಗಿದೆ. ದೇವದುರ್ಗ ತಾಲೂಕು ವ್ಯಾಪ್ತಿಯಲ್ಲಿ 2.6 ಮಿ,ಮೀ ಮಳೆಯಾಗಬೇಕಿತ್ತು ಆದರೆ 29.4 ಮಿ.ಮೀನಷ್ಟು ಮಳೆಯಾಗಿ ಶೇ.1039 ರಷ್ಟು ಅಧಿಕ ಮಳೆಯಾಗಿದೆ.
ಇದನ್ನೂ ಓದಿ: ಮಳೆ ಹಾನಿ ಕುರಿತು ಶೀಘ್ರ ವರದಿ ಸಲ್ಲಿಸಿ
ಮುಂಗಾರು ಹಂಗಾಮಿನ ಜೂ.1ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 306 ಮಿ.ಮೀ ನಷ್ಟು ವಾಡಿಕೆಯ ಮಳೆಯಾಗಬೇಕಿತ್ತು. 390 ಮಿ.ಮೀನಷ್ಟು ಮಳೆಯಾಗುವ ಮೂಲಕ ಶೇ.27 ರಷ್ಟು ಅಧಿಕ ಮಳೆಯಾಗಿದೆ.
ನಿರಂತರವಾಗಿ ವರುಣನ ಆರ್ಭಟಕ್ಕೆ ಜನರು ಬೇಸತ್ತು ಹೋಗಿದ್ದು, ಕೆಲಸ ಕಾರ್ಯಗಳಿಗೆ ತೆರಳಲು ತೊಂದರೆ ಉಂಟಾಗಿದೆ. ಗ್ರಾಮೀಣ ಭಾಗಗಳ ಹಳ್ಳ ಕೊಳ್ಳಗಳು ತುಂಬಿಕೊಂಡು ಸಂಚಾರ ಸ್ಥಗಿತಗೊಂಡಿವೆ. ಹಲವು ಗ್ರಾಮಗಳು ಸಂಪರ್ಕವನ್ನೂ ಕಳೆದುಕೊಂಡಿವೆ.
ನಗರಗಳಲ್ಲಿ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಮೈದಾನಗಳು ಕೆರೆಯಂತಾಗಿವೆ. ಹಳ್ಳಿಗಳಲ್ಲಿದ್ದ ಹಳೆಯ ಮನೆಗಳು ಕುಸಿದಿದ್ದು, ಜನರಿಗೆ ದಿಕ್ಕು ತೋಚದಂತಾಗಿದೆ.
ಇದನ್ನೂ ಓದಿ: ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋದ ಬ್ಯಾಂಕ್ ನೌಕರ
ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 9 ಮನೆಗಳು ಹಾನಿಗೊಳಗಾಗಿದ್ದು, ಲಿಂಗಸುಗೂರಿನಲ್ಲಿ 32, ಮಾನ್ವಿ ತಾಲೂಕಿನಲ್ಲಿ 1, ರಾಯಚೂರು ತಾಲೂಕಿನಲ್ಲಿ 19, ಸಿಂಧನೂರು ತಾಲೂಕಿನಲ್ಲಿ 33, ಮಸ್ಕಿ ತಾಲೂಕಿನಲ್ಲಿ 10 ಹಾಗೂ ಸಿರವಾರ ತಾಲೂಕಿನಲ್ಲಿ 4 ಮನೆಗಳು ಸೇರಿ ಜಿಲ್ಲೆಯಲ್ಲಿ 108 ಮನೆಗಳು ಹಾನಿಯಾಗಿವೆ.
ರಾಯಚೂರು ತಾಲೂಕಿನ ಬಿ.ಯದ್ಲಾಪೂರ ಗ್ರಾಮದಲ್ಲಿ 40 ವರ್ಷದ ಹಳೆಯ ಮನೆಯ ಮೇಲ್ಛಾವಣಿ ಸೋಮವಾರ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮದ ದಿವಾಕರ್ ಎಂಬುವವರ ಮನೆಯಲ್ಲಿ ಆರು ಜನ ವಾಸ ಮಾಡುತ್ತಿದ್ದರು. ಚಾವಣಿ ಕುಸಿಯುವ ವೇಳೆ ಮನೆಯಲ್ಲಿದ್ದ ಎಲ್ಲರೂ ಹೊರಗೆ ಬಂದಿದ್ದಾರೆ. ಇದೇ ರೀತಿ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದಿದ್ದು, ಜನರು ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕಳೆದುಕೊಂಡ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ ನೀಡಲಾಗುತ್ತಿದೆ. ಮನೆ ಹಾನಿಯಾಗಿರುವ ಬಗ್ಗೆ ಬಂದ ಮಾಹಿತಿಯನ್ನು ಕ್ರೂಡಿಕರಿಸಿ ಸರ್ವೆ ನಡೆಸಿ ಹಾನಿ ಪ್ರಮಾಣವನ್ನು ಆಧರಿಸಿ ಪರಿಹಾರ ವಿತರಿಸಲಾಗುತ್ತಿದೆ. ಶೇ.15ಕ್ಕಿಂತ ಮೇಲ್ಪಟ್ಟು ಶೇ.20 ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ 6500 ರೂ.ಗಳು, ಶೇ.50ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ 30 ಸಾವಿರ ರೂ., ಶೇ.75ಕ್ಕಿಂತ ಕಡಿಮೆ ಹಾಣಿಯಾದ ಮನೆಗಳಿಗೆ 50 ಸಾವಿರ ರೂ. ಹಾಗೂ ಶೇ.75 ಕ್ಕಿಮತ ಹೆಚ್ಚು ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ನೀಡುತ್ತಿದೆ.
ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಂಭಾಗದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತು ಕೆರಯಂತಾಯಿತು. ನಿಂತ ನೀರಿನಲ್ಲಿಯೇ ಆಂಬುಲೆನ್ಸ್ಗಳು ಓಡಾಡುತ್ತಿದ್ದವು. ಆಸ್ಪತ್ರೆಯ ರೋಗಿಗಳಿಗೆ ಮತ್ತು ರೋಗಿಯ ಪಾಲಕರಿಗೆ ತೊಂದರೆ ಉಂಟಾಯಿತು.
ಜಿಲ್ಲೆಯಲ್ಲಿ ಮಳೆಯಿಂದ ಸೂರು ಕಳೆದುಕೊಂಡ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ಹಾನಿಗೊಳಗಾದ 33 ಮನೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗಿದ್ದು, ಉಳಿದ 75 ಮನೆಗಳಿಗೆ ವಾರದೊಳಗಾಗಿ ಪರಿಹಾರ ಧನ ನೀಡಲಾಗುವುದು. | ಕೆ.ನಿತೀಶ, ಡಿಸಿ ರಾಯಚೂರು.