

ರಾಯಚೂರು: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ನಿತೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಸೋಮವಾರ ಮಾತನಾಡಿ, ಸಮ ಸಮಾಜವನ್ನು ಕಟ್ಟುವ ಆಶಯವನ್ನು ಹೊಂದಿದ್ದ ಮಹರ್ಷಿ ವಾಲ್ಮೀಕಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲಿ ಅನುಸರಿಸಬೇಕಾದ ನೀತಿಯನ್ನು ರಾಮಾಯಣದಲ್ಲಿ ತಿಳಿಸಿಕೊಟ್ಟಿದ್ದಾರೆ. ಅ.17ರಂದು ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಂಘ ಸಂಸ್ಥೆಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ವಿವಿಧ ಕಲಾ ತಂಡಗಳ ಮೂಲಕ ಮೆರವಣಿಗೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಗಿರಿಜನ ಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು.
ಅಂದು ಬೆಳಿಗ್ಗೆ 8ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರವಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆಶಾಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಸಿ ಗಜಾನನ ಬಾಲೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಶೈಲಾ ಕಾಚಾಪುರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್ ಶಂಕರಗೌಡ ಪಾಟೀಲ್, ಪ್ರವಾಸೋದ್ಯಮ ಇಲಾಖೆಯ ಎಡಿ ರಾಜೇಂದ್ರ ಜಲ್ದಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಡಿ ವೀರೇಶ ನಾಯಕ, ಡಿಡಿಪಿಐ ಕಾಳಪ್ಪ ಬಡಿಗೇರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಡಿಡಿ ಕೃಷ್ಣ ಶಾವಂತಗೇರಾ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಡಿಡಿ ಡಾ.ಅಶೋಕ ಕೋಲಕಾರ, ರಾಯಚೂರು ಕೃಷಿ ಇಲಾಖೆಯ ಎಡಿ ಪುಷ್ಪಲತಾ ಸೇರಿದಂತೆ ಇತರರಿದ್ದರು.