

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣವನ್ನು ಉನ್ನತ ತನಿಖೆಗೊಳಪಡಿಸಬೇಕು, ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ರ ಬಂಧನವಾಗಬೇಕೆಂದು ಜಿಲ್ಲಾ ಜೆಡಿಎಸ್‌ನಿಂದ ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭಾಗಿಯಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ಸಹ ಭಾಗಿತ್ವ ಸೇರಿದಂತೆ ಹಲವು ವ್ಯಕ್ತಿಗಳ ಕೈವಾಡವಿದ್ದು, ವಂಚನೆಯ ಕುರಿತು ಆಳವಾದ ತನಿಖೆಯ ಅವಶ್ಯಕತೆಯಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಪ್ರತಿಭಟನೆ
ಈಗಾಗಲೇ ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿ ಯಾವುದೇ ವರದಿಗಳು ಹೊರಬಂದಿಲ್ಲ ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಡಿಸಿ ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮ್‌ಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಕಾರ್ಯದರ್ಶಿ ಎನ್.ಶಿವಶಂಕರ, ಪ್ರಮುಖರಾದ ಬುಡ್ಡನಗೌಡ ಪಾಟೀಲ್, ರಾಮಕೃಷ್ಣ, ನರಸಿಂಹ ನಾಯಕ, ತಿಮ್ಮಾರೆಡ್ಡಿ, ಜಂಬುನಾಥ ಯಾದವ್ ಸೇರಿದಂತೆ ಇತರರಿದ್ದರು.