ರಾಯಚೂರು ವಿವಿ ಹಣಕಾಸು ವಿಭಾಗಕ್ಕೆ ಮಾಹಿತಿಯಿಲ್ಲದೆ ವ್ಯವಹಾರ ? * 2022-23ರ ಅವಧಿಯಲ್ಲಿ ಅಕ್ರಮದ ಅನುಮಾನ * ತನಿಖೆ ನಡೆಸುವಂತೆ ಕೋರಿ ಸರ್ಕಾರಕ್ಕೆ ಪತ್ರ

raichur
raichur
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಹಣಕಾಸು ವಿಭಾಗಕ್ಕೆ ಮಾಹಿತಿ ನೀಡದೆ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದು ಖಾಸಗಿ ಸಂಸ್ಥೆಗಳೊಂದಿಗೆ ವಹಿವಾಟು ನಡೆಸಿರುವ ಹಿನ್ನೆಲೆಯಲ್ಲಿ ಅಕ್ರಮದ ಶಂಕೆ ವ್ಯಕ್ತವಾಗಿದೆ.

ವಿವಿ ಆಡಳಿತ 2022-23ರಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸಿದ್ದರೂ ಅದರ ಬಗ್ಗೆ ಹಣಕಾಸು ವಿಭಾಗದಲ್ಲಿ ಒಂದೂ ದಾಖಲೆ ಇಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ. ಮಾಹಿತಿ ಹಕ್ಕು ನಿಯಮದಡಿ ಕೇಳಲಾದ ಪ್ರಶ್ನೆಯಿಂದ ಈ ಅನುಮಾನಾಸ್ಪದ ವಹಿವಾಟು ಬಯಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ವಿವಿ ಆಡಳಿತವು, ತನಿಖೆ ನಡೆಸುವಂತೆ ಕೋರಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯರಗೇರಾ ಬಳಿಯಿರುವ ರಾಯಚೂರು-ಯಾದಗಿರಿ ಜಿಲ್ಲೆ ಒಳನ್ನೊಳ ವಿವಿಗೆ ಒಂದೆಡೆ ಸರ್ಕಾರದಿಂದ ಸಮರ್ಪಕ ಅನುದಾನ ಸಿಗುತ್ತಿಲ್ಲ. ಮತ್ತೊಂದೆಡೆ 2022-23ರಲ್ಲಿ ಹಣಕಾಸು ವಿಭಾಗದ ಗಮನಕ್ಕಿಲ್ಲದೆ ವಿವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಲ್ಲದೆ, ಅದರ ಮೂಲಕ ವಿವಿ ಸಂಬಂಧಿತ ಹಣಕಾಸು ವಹಿವಾಟು ನಡೆಸಲಾಗಿದೆ ಎಂಬ ವಿಚಾರ ಬಯಲಾಗಿರುವುದನ್ನು ನೋಡಿದರೆ ಅಕ್ರಮದ ಅನುಮಾನ ಮೂಡಿದೆ.

== ಖಾಸಗಿ ಸಂಸ್ಥೆಗಳಿಗೆ ವರ್ಗಾವಣೆ ==

ರಾಯಚೂರು ವಿವಿಯಲ್ಲಿ 2022-23ರಲ್ಲಿ ಆಗಿನ ಕುಲಸಚಿವ 2022ರ ಜೂ.30ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಯಚೂರು ಶಾಖೆಗೆ ಪತ್ರ ಬರೆದು ಬಾಹ್ಯ ಪರೀಕ್ಷೆ, ಗುತ್ತಿಗೆದಾರರು, ಸರಬರಾಜುದಾರರು ಮತ್ತಿತರೆ ಕಾರಣಗಳಿಗೆ ಬಳಸಲು ವಿವಿ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದುಕೊಡಲು ಕೋರಿದ್ದಾರೆ. ಅದರಂತೆ ಬ್ಯಾಂಕು ಖಾತೆ 049112010000352 ತೆರೆಯಲಾಗಿದೆ. ಈ ಖಾತೆ ಮೂಲಕ ಬಾಹ್ಯ ಪರೀಕ್ಷೆ, ಗುತ್ತಿಗೆದಾರರು, ಸರಬರಾಜು ಹೆಸರಿನಲ್ಲಿ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಆಗಿರುವುದು ಗುಮಾನಿ ಮೂಡಿಸಿದೆ. ವಿವಿ ಆಡಳಿತವು 2022-23ರ ಅವಧಿಯಲ್ಲಿ ಯಾವುದೆ ರೀತಿಯ ಬಾಹ್ಯ ಪರೀಕ್ಷೆ, ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಲ್ಲ. ಆದರೂ, ಅದರ ಹೆಸರಿನಲ್ಲಿ ಯುಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಪರೀಕ್ಷೆ ನಡೆಸದಿದ್ದರೂ ಹಣವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಿರುವುದು ಅನುಮಾನಗಳಿಗೆ ದಾರಿ ಮಾಡಿಕೊಡುವ ರೀತಿಯಲ್ಲಿದೆ.

== ಆಡಳಿತ ಮಂಡಳಿ ಗಮನಕ್ಕೇ ಇಲ್ಲವಂತೆ ! ==

ಪರೀಕ್ಷೆ ಆಯೋಜನೆ ಸೇರಿ ಮತ್ತಿತರೆ ಹೆಸರಿನಲ್ಲಿ ರಾಯಚೂರು ವಿವಿಯಲ್ಲಿ ಕೋಟಿ ರೂ. ಗೂ ಮೀರಿದ ಹಣಕಾಸಿನ ವಹಿವಾಟು ನಡೆಸಲಾಗಿದೆ. ಆದರೆ, 2022-23ರಿಂದ ಇದುವರೆಗೆ ವಿವಿಯ ಕಾಲೇಜು ಅಭಿವೃದ್ಧಿ ಮಂಡಳಿ, ಆಡಳಿತ ಮತ್ತು ಶೈಕ್ಷಣಿಕ ವಿಭಾಗ, ಗ್ರಂಥಪಾಲಕರ ಕಚೇರಿ ಸೇರಿದಂತೆ ಯಾವುದೆ ವಿಭಾಗದಲ್ಲೂ ಪರೀಕ್ಷೆ ನಡೆಸಿದ ಮಾಹಿತಿಯಿಲ್ಲ. ಮಾಹಿತಿ ಹಕ್ಕು ಅಡಿ ಕೇಳಲಾದ ಪ್ರಶ್ನೆಗೆ ವಿವಿಯ ಈಗಿನ ಆಡಳಿತವು ‘ನಮ್ಮ ಬಳಿ ಈ ಕುರಿತು ಯಾವುದೆ ಮಾಹಿತಿಯಿಲ್ಲ’ ಎಂದೇ ಹೇಳಿದೆ.

== ಕುಲಸಚಿವ, ಸಿಂಡಿಕೇಟ್ ಸದಸ್ಯರ ಶಾಮೀಲು ? ==

ಆರ್ಥಿಕ ಖರ್ಚು-ವೆಚ್ಚಗಳಲ್ಲಿ ಪರಿಶೋಧನೆ ನಡೆಸುವ ವಿವಿ ಹಣಕಾಸು ವಿಭಾಗವು ಪ್ರತಿ ವರ್ಷ ಸರ್ಕಾರಕ್ಕೆ ಒಪ್ಪಿಸುತ್ತದೆ. ಆದರೆ, 2022-23ರಲ್ಲಿ ಪರೀಕ್ಷೆ, ಗುತ್ತಿಗೆದಾರರು ಸೇರಿದಂತೆ ಇತರೆ ಕಾರಣಗಳಿಗೆ ತೆರೆದ ಉಳಿತಾಯ ಖಾತೆ ಬಗ್ಗೆ ಹಣಕಾಸು ಇಲಾಖೆಗೆ ಮಾಹಿತಿಯಿಲ್ಲ. ಅಷ್ಟೇ ಏಕೆ ?, ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್‌ಗಳೂ ವಿಭಾಗದಲ್ಲಿಲ್ಲ ಎಂಬ ಮಾಹಿತಿಯಿದೆ. ಹಾಗೆಯೇ ಲೆಕ್ಕ ಪರಿಶೋಧನೆಯೂ ನಡೆದಿದ್ದು, ಈ ಖಾತೆಗಳ ಅಡಿಟ್ ನಡೆಸಿಲ್ಲ ಎಂದು ಹೇಳಿರುವುದು ಅಕ್ರಮದ ವಾಸನೆ ಜೋರಾಗಿ ಕಂಡುಬಂದಿದೆ. ಬ್ಯಾಂಕ್ ಖಾತೆ ತೆರೆದ ಅವಧಿಯಲ್ಲಿ ಆಡಳಿತ ನಡೆಸುತ್ತಿದ್ದ ಕುಲಸಚಿವರು, ಸಿಂಡಿಕೇಟ್ ಸದಸ್ಯರೊಬ್ಬರು ಈ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆಯಿದೆ. ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಸರ್ಕಾರದ ಹಣದ ಬಳಕೆಯನ್ನು ವಿವಿ ಆಡಳಿತವೂ ಸಂಪೂರ್ಣ ಕಲೆಹಾಕಿದೆ. ಬ್ಯಾಂಕುಗಳಿಂದ ಖಾತೆ ಮಾಹಿತಿ ಕಲೆಹಾಕಿದ್ದು, ಸರ್ಕಾರಕ್ಕೆ ಈ ಬಗ್ಗೆ ತನಿಖೆಗೆ ಒಪ್ಪಿಸಲು ಕೋರಿ ನಿವೇದನೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈಗ ಸರ್ಕಾರವು ಅಕ್ರಮದ ತನಿಖೆಗೆ ಮುಂದಾಗುವುದೇ ಎಂಬುದು ಕಾದು ನೋಡಬೇಕು.

ರಾಯಚೂರು ವಿವಿಯಲ್ಲಿ ವಿವಿಧ ಸಂಸ್ಥೆಗಳ ಪರೀಕ್ಷೆ ನಡೆಸಲು ಅಕ್ರಮವಾಗಿ ಹಣಕಾಸಿನ ವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಹಿಂದಿನ ಕುಲಪತಿ ಹಾಗೂ ಕುಲಸಚಿವ ಅವಧಿಯಲ್ಲಿ ನಡೆದಿರುವುದರಿಂದ ನಮ್ಮಲ್ಲಿ ಒಂದು ಸಿಂಡಿಕೇಟ್ ಉಪ ಕಮಿಟಿ ಮಾಡಲಾಗಿದೆ. ಸಿಎಂ ಕಾರ್ಯಕ್ರಮದ ನಂತರ ಕಮಿಟಿಯಿಂದ ತನಿಖೆ ಪ್ರಾರಂಭ ಮಾಡಲಾಗುವುದು. ಒಂದು ವೇಳೆ ಆಕ್ರಮವಾದರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸುಯಮೀಂದ್ರ ಕುಲಕರ್ಣಿ ಹಂಗಾಮಿ ಕುಲಪತಿ, ರಾಯಚೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net