

ರಾಯಚೂರು: ಯೂಕ್ರೇನ್‌ನಲ್ಲಿ ಜಿಲ್ಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಪ್ರಸ್ತುತ ವಿಮಾನಯಾನ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಜಿಲ್ಲೆಗೆ ಹಿಂದಿರುಗಲು ಸಾಧ್ಯವಾಗದ ಹಿನ್ನಲೆಯಲ್ಲಿ ಪಾಲಕರು ಆತಂಕದಲ್ಲಿದ್ದಾರೆ.
ಯೂಕ್ರೇನ್‌ನಲ್ಲಿರುವ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಪಾಲಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಪಾಲಕರು ಜಿಲ್ಲಾಡಳಿತಕ್ಕೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಿಖರ ಸಂಖ್ಯೆ ತಿಳಿಯದಂತಾಗಿದೆ. ರಾಯಚೂರು ನಗರದ ವೈ.ಎಸ್.ಮಯೂರ್, ಮಹ್ಮದ್ ಅಸರ್ ಹುಸೇನ್, ತಾಲೂಕಿನ ದೇವಸುಗೂರಿನ ಚನ್ನವೀರೇಶ, ದೇವದುರ್ಗದ ರುಬೀನಾ, ಅಭಿಷೇಕ, ಲಿಂಗಸುಗೂರಿನ ಪ್ರಜ್ವಲ್, ಮಸ್ಕಿ ತಾಲೂಕು ತುರ್ವಿಹಾಳದ ಸೋಮು, ನಂದೀಶ್, ಸಿಂಧನೂರಿನ ತೈಯಬಾ ಕೌಸರ್, ಸಬಾ ಕೌಸರ್ ಯೂಕ್ರೇನ್‌ನಲ್ಲಿರುವ ಮಾಹಿತಿ ಲಭ್ಯವಾಗಿದೆ.
ನಗರದ ವಾಣಿಜೋದ್ಯಮಿ ಸಂಪತ್‌ಕುಮಾರ ಪುತ್ರ ವೈ.ಎಸ್.ಮಯೂರ ಶನಿವಾರ ಭಾರತಕ್ಕೆ ಹಿಂದಿರುಗಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ವಿಮಾನಯಾನ ಸ್ಥಗಿತಗೊಂಡಿದ್ದರಿಂದ ಯೂಕ್ರೇನ್‌ನಲ್ಲಿಯೇ ಉಳಿದುಕೊಳ್ಳುವಂತಾಗಿದೆ. ದಾತಾರ್ ಕಾಲನಿಯ ಉರಗ ತಜ್ಞ ಶೇಕ್ ಅಫ್ಸರ್ ಹುಸೇನ್ ಪುತ್ರ ಮಹ್ಮದ್ ಅಸರ್ ಹುಸೇನ್ ವಾಸವಾಗಿರುವ ಅಪಾರ್ಟಮೆಂಟ್‌ನ 10 ಕಿ.ಮೀ. ದೂರದಲ್ಲಿ ಬಾಂಬ್ ದಾಳಿ ನಡೆದಿದ್ದು, ಈ ಬಗ್ಗೆ ಪಾಲಕರಿಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾನೆ. ಊಟಕ್ಕೂ ತೊಂದರೆಯಾಗಿರುವುದಾಗಿ ಹೇಳಿಕೊಂಡಿದ್ದಾನೆ.
ಯೂಕ್ರೇನ್‌ನಲ್ಲಿರುವ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದಾರೆ. ಬಾಂಬ್ ದಾಳಿಯಿಂದ ಸುರಕ್ಷಿತವಾಗಿರಲು ಅಪಾರ್ಟ್‌ಮೆಂಟ್ ಕೆಳಗಿನ ಬಂಕರ್‌ಗಳಲ್ಲಿ ಆಶ್ರಯ ಪಡೆದಿರುವುದಾಗಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಸಾಧ್ಯವಾದಷ್ಟು ಬೇಗ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತರುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಪಾಲಕರು ಮನವಿ ಮಾಡುತ್ತಿದ್ದಾರೆ.