ರೈಲಿನಲ್ಲಿ ಸಹ ಪ್ರಯಾಣಿಕರಿಂದ ಮಗುವಿನ ಅಪರಹರಣ

raichur rs
Published on

ರಾಯಚೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ಮೂರು ವರ್ಷ ಮಗುವನ್ನು ಸಹ ಪ್ರಯಾಣಿಕರು ಆ.29ರಂದು ಅಪಹರಿಸಿಕೊಂಡು ಹೋಗಿದ್ದು, ಅಪಹರಣ ಮಾಡಿದ ಆರೋಪಿಗಳನ್ನು ರಾಯಚೂರು ರೈಲ್ವೆ ಪೊಲೀಸರು ಆ.30ರಂದು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರಿನಿಂದ ಬೆಂಗಳೂರಿಗೆ ಪ್ರಕಾಶ್ ಹಾಗೂ ಹಂಪಮ್ಮ ದಂಪತಿ ತಮ್ಮ ಮಗುವಿನ ಜತೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರಗಿ ಮೂಲದ ರೂಪೇಶ್ ಹಾಗೂ ಕುಸುಮ ಎಂಬುವವರು ಪ್ರಯಾಣ ಮಾಡುತ್ತಿದ್ದರು. ರಾಯಚೂರಿನಿಂದ ಅನಂತಪುರದ ವರೆಗೆ ಮಗು ಮತ್ತು ದಂಪತಿಯೊಂದಿಗೆ ಸಲುಗೆ ಬೆಳೆಸಿ ನಂತರ ಅನಂತಪುರದಲ್ಲಿ ಮಗುವನ್ನು ಎತ್ತಿಕೊಂಡು ರೂಪೇಶ್, ಕುಸುಮ ಪರಾರಿಯಾಗಿದ್ದಾರೆ.

ಮಗುವನ್ನು ಕರೆದುಕೊಂಡು ಅನಂತಪುರದಿಂದ ಮಂತ್ರಾಲಯಕ್ಕೆ ಹೋದ ರೂಪೇಶ್ ದಂಪತಿ ಮಂತ್ರಾಲಯದಲ್ಲಿ ಮಗು ಗುರುತು ಸಿಗದಂತೆ ಹೇರ್ ಕಟ್ ಮಾಡಿಸಿ, ಬೇರೆ ಬಟ್ಟೆಯನ್ನು ಹಾಕಿದ್ದಾರೆ.
ವಿಷಯ ತಿಳಿದೊಡನೆ ಮಗುವಿನ ತಂದೆ ಪ್ರಕಾಶ್ ಅನಂತಪುರ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಮೇರೆಗೆ ರಾಯಚೂರು ರೈಲ್ವೆ ಪೊಲೀಸರು ರೂಪೇಶ್ ಹಾಗೂ ಕುಸುಮ ಎಂಬುವವರನ್ನು ಬಂಧಿಸಿ ಮಗು ಸಮೇತ ಅನಂತಪುರ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ 22ವರ್ಷಗಳಿಂದ ಮಕ್ಕಳಿಲ್ಲ ಎಂಬ ಕಾರಣದಿಂದ ಮಗುವನ್ನು ಎತ್ತಿಕೊಂಡು ಹೋಗಿರುವುದಾಗಿ ಆರೋಪಿಗಳು ಹೇಳಿತ್ತಿದ್ದು, ಮಂತ್ರಾಲಯದಿಂದ ರಾಯಚೂರು ಮೂಲಕವಾಗಿ ಮತ್ತೆ ಕಲಬುರಗಿಗೆ ಹೋಗುತ್ತಿರುವುದಾಗಿ ಆರೋಪಿ ದಂಪತಿ ತಿಳಿಸಿದ್ದಾರೆ.
ರೈಲಿನಲ್ಲಿದ್ದ ಇತರೆ ಪ್ರಯಾಣಿಕರಿಗೆ ಎಲ್ಲಿಯಾದರೂ ದತ್ತು ಮಕ್ಕಳು ಸಿಗುತ್ತಾರೆಯೇ ನೋಡಿ ಹೇಳಿ ಎಂದು ಆರೋಪಿ ದಂಪತಿ ತಮ್ಮ ಮೊಬೈಲ್ ನಂಬರ್ ನೀಡಿದ್ದರು. ಮೊಬೈಲ್ ನೆಟ್‌ವರ್ಕ್ ಆದಾರದ ಮೇಲೆ ಪೊಲೀಸರು ರೂಪೇಷ್ ಹಾಗೂ ಕುಸುಮ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net