

ರಾಯಚೂರು: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಮೂರನೇ ದಿನ ಪೂರೈಸಿದ್ದು, ಆಂಧ್ರ ಮತ್ತು ತೆಲಂಗಾಣಕ್ಕೆ ಸಂಚರಿಸುವ 20 ಬಸ್ ಹೊರತುಪಡಿಸಿ ಉಳಿದ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ಶ್ರೀಶೈಲಕ್ಕೆ ಹೋಗಿದ್ದ ಬಸ್‌ಗಳು ವಾಪಸ್ ಬಂದಿವೆ ಎಂದು ಹೇಳಲಾಗುತ್ತಿದ್ದು, ಡಿಪೋ ಸಿಬ್ಬಂದಿಯನ್ನು ಬಳಸಿಕೊಂಡು ಆಂಧ್ರ, ತೆಲಂಗಾಣ ಮಾರ್ಗದಲ್ಲಿ ಸಂಚರಿಸುವ ಕೆಲ ಬಸ್‌ಗಳ ಸಂಚಾರ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಉಳಿದ ಮಾರ್ಗದ ಬಸ್‌ಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.
ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಯುಗಾದಿಗೆ ಶ್ರೀಶೈಲಕ್ಕೆ ಹೋಗಲು ಅಣಿಯಾಗಿದ್ದವರು, ಪ್ರಯಾಣ ಮೊಟಕುಗೊಳಿಸಿದ್ದಾರೆ. ಪಾದಯಾತ್ರೆಯಲ್ಲಿ ತೆರಳಿದವರು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಬರಲು ಪರಿತಪಿಸುತ್ತಿದ್ದಾರೆ. ಸರಕು ಸಾಗಣೆ ವಾಹನಗಳಲ್ಲೇ ಊರುಗಳಿಗೆ ಹಿಂದಿರುಗುತ್ತಿದ್ದಾರೆ.