ರಾಯಚೂರು: ಜಿಲ್ಲೆಯ ಎರಡು ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ನಿರ್ವಹಣೆಯಿಲ್ಲದೇ ಬಂದ್ ಆಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟನೆಯಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ರಾಯಚೂರು ನಗರದ ಯರಮರಸ್ ಬೈಪಾಸ್‌ವೃತ್ತ, ಗಂಜ್ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ರೈಲ್ವೆ ಸ್ಟೇಷನ್ ವೃತ್ತ ಹಾಗೂ ಆರ್‌ಟಿಒ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿದ್ದು ಆದರೆ ಕೇವಲ ಗಂಜ್ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಸಿಗ್ನಲ್‌ಗಳು ಅಳವಡಿಕೆಯಾಗಿದಾಗಿನಿಂದಲೂ ಕಾರ್ಯ ನಿರ್ವಹಿಸದೇ ನಿರುಪಯುಕ್ತ ಸ್ಥಿತಿಯಲ್ಲಿವೆ.
ಸಿಂಧನೂರಿನಲ್ಲಿ ಒಟ್ಟು ಮೂರು ಪ್ರಮುಖ ವೃತ್ತಗಳಿವೆ ಅವುಗಳಲ್ಲಿ ಗಾಂಧಿ ವೃತ್ತದಲ್ಲಿ ಮಾತ್ರ ಸಿಗ್ನಲ್ ಇದ್ದು, ಪಿಡಬ್ಲೂಡಿ ಕ್ಯಾಂಪ್‌ಬಳಿಯ ಸಿಗ್ನಲ್ ಆಫ್ ಆಗಿದೆ. ಜತೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಇದ್ದ ಸಿಗ್ನಲ್ ಕಳೆದ ಐದಾರು ವರ್ಷಗಳ ಹಿಂದೆ ಬಂದ್ ಆಗಿದೆ ಅಲ್ಲಿದ್ದ ಸಿಗ್ನಲ್ ಕಂಬವನ್ನು ತೆರವುಗೊಳಿಸಲಾಗಿದೆ.
ಉಳಿದಂತೆ ಲಿಂಗಸುಗೂರಿನಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಬೇಡಿಕೆಯಿದೆ. ದೇವದುರ್ಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯಿದ್ದರೂ ಯಾವ ವೃತ್ತದಲ್ಲಿಯೂ ಸಿಗ್ನಲ್‌ಗಳೇ ಇಲ್ಲ.
ಟ್ರಾಫಿಕ್ ಸಿಗ್ನಲ್‌ಗಳಿಲ್ಲದ ಕಾರಣ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು, ರಸ್ತೆ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುವ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ, ಸಂಚಾರಿ ನಿಯಮಗಳ ಉಪಕರಣಗಳನ್ನೂ ಸುಸ್ಥಿತಿಯಲ್ಲಿಡುವುದು ಅತಿಮುಕ್ಯವಾಗಿದೆ.
ಟ್ರಾಫಿಕ್ ಉಪಕರಣಗಳ ನಿರ್ವಹಣೆಗೆ ಗುತ್ತಿಗೆ ನೀಡಿದ ಕಂಪನಿ ಬಗ್ಗೆ ಮಾಹಿತಿ ಕೇಳಲು ಟ್ರಾಫಿಕ್ ಠಾಣೆ ಹಾಗೂ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸಂಪರ್ಕಿಸಿದರೂ ಮಾಹಿತಿ ನೀಡಿಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನಿಯಮವನ್ನು ರೂಪಿಸಲಾಗಿದೆ. ನಗರ ಸೇರಿದಂತೆ ಜಿಲ್ಲಾದ್ಯಂತ ನಿಯಮ ಕಟ್ಟುನಿಟ್ಟಾಗಿ ಪಾಲನೆಯೂ ಆಗುತ್ತಿದೆ. ಆದರೆ ಟ್ರಾಫಿಕ್ ಸಿಗ್ನಲ್‌ಗಳಿಲ್ಲದೇ ಪ್ರಮುಖ ವೃತ್ತಗಳಲ್ಲಿ ದೊಡ್ಡ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆಗಳೂ ಇವೆ.
ಕೇವಲ ಸಿಗ್ನಲ್‌ಗಳು ಮಾತ್ರವಲ್ಲದೇ ಬಹುತೇಕ ಕಡೆ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾಗಳು ನಿರ್ವಹಣೆ ಇಲ್ಲದೇ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾತುಗಳೂ ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿವೆ.
ರಸ್ತೆಯ ತಿರುವುಗಳಲ್ಲಿ ಅಳವಡಿಸಲಾದ ತಿರುವ ಸುರಕ್ಷತಾ ಕನ್ನಡಿ(ಟ್ರಾಫಿಕ್ ಕಾನ್ವೆಕ್ಸ್ ಮಿರರ್)ಗಳು ಸಹಿತ ನಿರ್ವಹಣೆಯಿಲ್ಲದೇ ದೂಳು ಹಿಡಿದಿವೆ. ನಿರ್ವಹಣೆಯ ಕೊರತೆಯಿಂದ ಸಂಚಾರಿ ಉಪಕರಣಗಳು ಬಂದ್ ಆಗುತ್ತಿರುವುದರಿಂದ ಸುರಕ್ಷಿತ ಸಂಚಾರ ಮಾಯವಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸ್, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಸಂಚಾರಿ ಉಪಕರಣಗಳನ್ನು ಅಳವಡಿಸಲು, ದುರಸ್ತಿಗೊಳಿಸಲು ಮುಂದಾಗಬೇಕು. ಅಲ್ಲದೇ ನಿರ್ವಹಣೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ.
ಸೆನ್ಸರ್ ಕ್ಯಾಮರಾಗಳೂ ಮಾಯ
ಈ ಹಿಂದೆ ನಗರದಲ್ಲಿ ಸೆನ್ಸರ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಈ ಕ್ಯಾಮರಾಗಳು ಸಿಗ್ನಲ್ ಜಂಪ್ ಮಾಡಿದವರನ್ನು ಪತ್ತೆ ಹಚ್ಚಿ ನೇರವಾಗಿ ವಾಹನ ಸವಾರರಿಗೆ ನೋಟಿಸ್ ಕಳಿಸುವ ಕೆಲಸ ಮಾಡುತಿತ್ತು. ಆದರೆ ನಿರ್ವಹಣೆ ಇಲ್ಲದೇ ಅವುಗಳು ಕೂಡ ನಿರುಪಯುಕ್ತವಾದವು.
ಹಂತ ಹಂತವಾಗಿ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಸಿಸಿಟಿವಿ ಕ್ಯಾಮರಾಗಳು ಅಳವಡಿಸುವ ಕಾರ್ಯ ಹಾಗೂ ಟ್ರಾಫಿಕ್ ಸಿಗ್ನಲ್‌ಗಳ ದುರಸ್ತಿ ಕಾರ್ಯವೂ ಶೀಘ್ರವೇ ಆರಂಭವಾಗಲಿದೆ.
| ಎಂ.ಪುಟ್ಟಮಾದಯ್ಯ, ಎಸ್ಪಿ ರಾಯಚೂರು.