ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ 20 ಕೋಟಿ: ಗೂಗಲ್, ಮಸ್ಕಿ ತಾಣಗಳ ಯೋಜನೆಗಳಿಗೆ ಅನುಮೋದನೆ

maski shasana
Published on

ರಾಯಚೂರು: ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಜಿಲ್ಲೆಯ ಎರಡು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ 20 ಕೋಟಿ ರೂ. ಹೆಚ್ಚುವರಿ ಅನುದಾನದೊಂದಿಗೆ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ.

ಕಲಬುರಗಿಯಲ್ಲಿ ಸೆ.17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ನಂತರ ಸರ್ಕಾರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿ ಅಧಿಕಾರಿಗಳ ಮಟ್ಟದ ಚರ್ಚಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ಇದೀಗ ಸರ್ಕಾರದಿಂದ ಯೋಜನೆಗಳಿಗೆ ಅನುಮೋದನೆ ದೊರೆತ್ತಿದ್ದು, ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನವೂ ಬಿಡುಗಡೆಯಾಗಿದೆ, ಇನ್ನೇನು ಸರ್ಕಾರದಿಂದ ಇಲಾಖೆಗೆ ಆದೇಶ ಹೊರಡಿಸುವ ಕೆಲಸ ಬಾಕಿ ಇದ್ದು, ಶೀಘ್ರದಲ್ಲಿಯೇ ಆದೇಶ ಹೊರಬಿದ್ದು, ಕಾಮಗಾರಿಗಳು ಆರಂಭವಾಗುವ ಸಾಧ್ಯತೆಗಳಿವೆ.

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿರುವ ಅಶೋಕನ ಶಿಲಾಶಾಸನ ಪ್ರದೇಶದಲ್ಲಿ 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಗತ್ಯ ಪ್ರವಾಸಿ ಸೌಲಭ್ಯವನ್ನು ಒದಗಿಸಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಜಿಲ್ಲಾ ಕಚೇರಿಗೆ ಆದೇಶ ಬರುವುದು ಬಾಕಿಯಿದೆ.

Google barrage bridge
Google barrage bridge

ದೇವದುರ್ಗ ತಾಲೂಕಿನ ಗೂಗಲ್‌ಗ್ರಾಮದ ಕೃಷ್ಣಾನದಿಯ ಗೂಗಲ್ ಬ್ಯಾರೇಜ್ ಹಾಗೂ ಶ್ರೀ ಅಲ್ಲಮಪ್ರಭು ಗುಹಾಂತರ ದೇವಾಲಯದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುಮೋದನೆ ನಿಡಲಾಗಿದೆ.

ಜಿಲ್ಲೆಯ ಎರಡು ಪ್ರವಾಸಿ ತಾಣಗಳಲ್ಲಿ ಅಗತ್ಯ ಹಾಗೂ ಸಮಗ್ರ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ.

ಇಲಾಖೆಯಿಂದ ಸಲ್ಲಿಸಲಾದ ಪ್ರಸ್ತಾವನೆಗಳಲ್ಲಿರುವ ಅಂಶಗಳನ್ನು ಪರಿಶೀಲಿಸಿ ಸರ್ಕಾರದಿಂದ ಆದೇಶ ಹೊರಡಿಸುವ ಹಂತದಲ್ಲಿದ್ದು, ಆದೇಶದ ನಂತರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಕ್ರಿಯಾ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆೆ. ಕ್ರಿಯಾ ಯೋಜನೆಗೆ ಅನುಮೋದನೆ ದೊರೆತ ನಂತರ ಯೋಜನೆಗಳ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.

ಮಸ್ಕಿ ಶಾಸನದಲ್ಲಿ ಪ್ರಾಚೀನ ಭಾರತದ ಒಳನೋಟ:

ಮಸ್ಕಿಯಲ್ಲಿ ಮೌರ್ಯ ಚಕ್ರವರ್ತಿ ಅಶೋಕನ ನೀತಿಗಳು ಮತ್ತು ತತ್ವಗಳ ಸಾಕ್ಷಿಯನ್ನು ಸಂರಕ್ಷಿಸುತ್ತಾ ಬಂದಿದ್ದು, ಶಾಸನವು ಪ್ರಾಚೀನ ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ಆಡಳಿತದ ಅಮುಲ್ಯವಾದ ಒಳನೋಟವನ್ನು ಒದಗಿಸುತ್ತದೆ. ಈ ಶಾಸನವನ್ನು 3ನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಯಿಂದ ಕೆತ್ತಲ್ಪಟ್ಟ ಅನೇಕ ಶಾಸನಗಳಲ್ಲಿ ಒಂದಾಗಿದೆ. 1951ರಲ್ಲಿ ಸಿ.ಬೀಡನ್ ಎಂಬುವವರು ಶಾಸನವನ್ನು ಕಂಡುಹಿಡಿದಿದ್ದು, ಪುರಾತತ್ವ ಶಾಸ್ತ್ರಜ್ಞ ರಾರ್ಬರ್ಟ್ ಸೆವೆಲ್ ಸವಿಸ್ತಾರವಾಗಿ ಅಧ್ಯಯನ ಮಾಡಿದ್ದಾರೆ. ಇದು ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿದೆ.

Allaprabhu temple

ಗುಹೆಕಲ್ಲು ಹಿನ್ನೆಲೆ....

ಗೂಗಲ್ ಗ್ರಾಮದ ಅಲ್ಲಮಪ್ರಭು ಗುಹಾಂತರ ದೇವಸ್ಥಾನವು ಕೃಷ್ಣಾನದಿಯ ದಂಡೆಯ ಮೇಲಿದೆ, ದೊಡ್ಡ ಕಲ್ಲಿನ ಗವಿ ಇದೆ. ಮೊದಲು ಚಾಲನೆಯಲ್ಲಿದ್ದ ‘ಗುಹೆಕಲ್ಲು’ ಎಂಬ ಪದವು ಕಾಲ ಸರಿದಂತೆ ’ಗೂಗಲ್ಲು’ ಆಗಿರಬಹುದೆಂಬ ಅಭಿಪ್ರಾಯವಿದೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ ಎಂಬ ನಂಬಿಕೆಯಿದ್ದು, ರಾಯಚೂರಿನಿಂದ 56 ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ 25 ಕಿ.ಮೀ ಇದ್ದು, ಇಲ್ಲಿ ಪ್ರತಿವರ್ಷ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.

ಯಾವ್ಯಾವ ಸೌಲಭ್ಯ.?

ಪ್ರವಾಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಗೂಗಲ್ ಬ್ಯಾರೇಜ್, ಗುಹಾಂತರ ದೇವಸ್ಥಾನ ಹಾಗೂ ಮಸ್ಕಿ ಅಶೋಕ ಶಾಸನದ ಹತ್ತಿರ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ರಸ್ತೆ, ಶೌಚಾಲಯ, ವಸತಿ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಕ್ರಿಯಾ ಯೋಜನೆ ರೂಪಿಸುವ ನಿರೀಕ್ಷೆಯಿದೆ.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಅಭಿವೃದ್ಧಿಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಸರ್ಕಾರದಿಂದ ಕಾಮಗಾರಿ ಆರಂಭಕ್ಕೆ ಅನುಮೋದನೆ ದೊರೆತು ಶೀಗ್ರದಲ್ಲಿಯೇ ಗೂಗಲ್ ಹಾಗೂ ಮಸ್ಕಿ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿದೆ. ಉಳಿದ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ. |ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಲಬುರಗಿ ಕ್ಯಾಬಿನೇಟ್ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದಿಂದ ಮಾರ್ಗಸೂಚಿ ಬಂದ ನಂತರ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. |ರಾಜೇಂದ್ರ ಜಲ್ದಾರ್, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net