

ರಾಯಚೂರು: ಮೌಲ್ಯಯುತವಾದ ವಿಚಾರಗಳನ್ನು ಪದಗಳ ಮೂಲಕ ರಚನೆ ಮಾಡಿ ಜನರಿಗೆ ತಲುಪಿಸುವಂತಹ ಕೆಲಸವನ್ನು ತತ್ವಪದಕಾರರು ಮಾಡುತ್ತಿದ್ದಾರೆ ಎಂದು ರಾಯಚೂರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಹೇಳಿದರು.
ನಗರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಂದಿನಿ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಲಿಂಗೈಕ್ಯ ಸಾತ್ವಿರಮ್ಮ ಗುರುಲಿಂಗಪ್ಪ ಸಾವಳಗಿ ಮತ್ತು ಚನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿ ಪ್ರಧಾನ ಹಾಗೂ ತತ್ವಪದಕಾರರ ಕುರಿತು ಮೂರನೇ ಮಾಸಿಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕಲುಷಿತ ವಾತಾವರಣದಲ್ಲಿ ಹಾಗೂ ವಿಷಮ ಪರಿಸ್ಥಿತಿಯಲ್ಲಿ ಕನ್ನಡತನವನ್ನು ಉಳಿಸುವ ಚಿಂತನೆಗಳನ್ನು ಜನಸಾಮಾನ್ಯರಿಗೆ ಹಂಚು ವಂತಹ ಕೆಲಸವನ್ನು ಶರಣರು ಮಾಡಿದ್ದಾರೆ ಎಂದರು.
ವಿಶೇಷವಾಗಿ ಪ್ರಶಿಕ್ಷಣಾರ್ಥಿಗಳು, ಶಿಕ್ಷಕರಾದವರು ಹೊಸ ವಿಚಾರಗಳನ್ನು ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದಾಗ ಮಾತ್ರ ಆದರ್ಶ ಶಿಕ್ಷಕರಾಗಿ ಹೊರಹೊಮ್ಮಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ ದಿನ್ನಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಎಂ.ಗಿರಿಯಪ್ಪ ಹಾಗೂ ಮಲಿಯಾಬಾದ್ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪಲತಾಗೆ ಚನ್ನಪ್ಪ ಸ್ಮಾರಕ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಕರಾದ ಡಾ.ಶಿವಯ್ಯ ಹಿರೇಮಠ, ಎಸ್.ಧರ್ಮಾವತಿ ನಾಯಕ, ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ನಂದಿನಿ ಕಾಲೇಜನ ಪ್ರಾಚಾರ್ಯೆ ಅಲಿಷಾ ಜೋಸೆಫ್, ಕಸಾಪ ತಾಲೂಕು ಕೋಶಾಧ್ಯಕ್ಷ ವಿಜಯ ರಾಜೇಂದ್ರ. ಕಸಾಪ ಪ.ಪಂಗಡದ ತಾಲೂಕು ಪ್ರತಿನಿಧಿ ಮಲ್ಲೇಶ ನಾಯಕ ಸೇರಿದಂತೆ ಇತರರಿದ್ದರು.