ಅನಧಿಕೃತ ಇಟ್ಟಂಗಿ ಭಟ್ಟಿಗಳಿಂದ ತೊಂದರೆ

Untitled design (49)
Published on

ರಾಯಚೂರು: ತಾಲೂಕಿನ ಶಾಖವಾದಿಯಿಂದ ಸಗಮಕುಂಟಾ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಇಟ್ಟಂಗಿ ಭಟ್ಟಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ರಾಮು ಒತ್ತಾಯಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಪರಿಸರ, ಕಂದಾಯ ಇಲಾಖೆ ಸೇರಿ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆ ಇಟ್ಟಂಗಿ ಭಟ್ಟಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿನ ಜನರ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಟ್ಟಿಗಳಲ್ಲಿ ಭತ್ತದ ಹೊಟ್ಟನ್ನು ಸುಡುವುದರಿಂದ ದಟ್ಟ ಹೊಗೆ ಹರಡುತ್ತಿದ್ದು, ರಸ್ತೆಯಲ್ಲಿ ಹೋಗುವ ವಾಹನ ಸವಾರ ಕಣ್ಣುಗಳಿಗೆ ಹೊಗೆ ಹಾಗೂ ಧೂಳು ಹೋಗಿ ಅನೇಕ ಬಾರಿ ಅಪಘಾತಗಳು ನಡೆದಿವೆ. ಈ ಬಗ್ಗೆ ಈಗಾಗಲೇ ಮಾಲೀನ್ಯ ನಿಯಂತ್ರಣ ಇಲಾಖೆ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಮು ದೂರಿದರು. ವೇದಿಕೆ ಜಿಲ್ಲಾಧ್ಯಕ್ಷ ಕೆ.ಬಸವರಾಜ, ಪದಾಧಿಕಾರಿಗಳಾದ ನಾಗಪ್ಪ, ಆಂಜನೇಯ, ಮಾಳಿಂಗರಾಯ, ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net