

ರಾಯಚೂರು: ವೈಯಕ್ತಿಕ ಸಮಸ್ಯೆಗಳ ಕಾರಣ ವೆಂಕಟೇಶ (20) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ 13ನೇ ವಾರ್ಡಿನಲ್ಲಿ ಗುರುವಾರ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ಧಾರವಾಡದಲ್ಲಿ ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದ ವೆಂಕಟೇಶ್ ಗುರುವಾರ ಬೆಳಿಗ್ಗೆ ಧಾರವಾಡದಿಂದ ಸಿರವಾರಕ್ಕೆ ಬಂದಿದ್ದ, ಅಂದು ತಡರಾತ್ರಿ ನೇಣು ಹಾಕಿಕೊಂಡಿದ್ದು, ಶುಕ್ರವಾರ ಪೊಲೀಸ್ ಠಾಣೆಗೆ ಮಾಹಿತಿ ದೊರಕಿದೆ.
ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಯುವಕ ಪತ್ರದಲ್ಲಿ ‘ನನ್ನ ವಯಕ್ತಿ ಮತ್ತು ಮಾನಸಿಕ ಸಮಸ್ಯೆಗಳಿಂದ ನೇಣು ಹಾಕಿಕೊಂಡಿದ್ದೇನೆ ಇದಕ್ಕೆ ಯಾರು ಜವಾಬ್ದಾರರಲ್ಲ ಹಾಗೂ ಹೊಣೆಗಾರರಲ್ಲ, ಅಮ್ಮ ಅಪ್ಪ ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ ಆದರೂ ನನ್ನ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಮುಂದಿನ ಜನ್ಮ ಇದ್ದರೆ ಮತ್ತೆ ನಿಮ್ಮ ಮಗನಾಗಿ ಹುಟ್ಟಿ ಬರುತ್ತೇನೆ‘ ಎಂದು ಬರೆದಿದ್ದಾನೆ.
ವೆಂಕಟೇಶ್‌ಗೆ ತಂದೆ, ತಾಯಿ ಹಾಗೂ ನಾಲ್ಕು ಜನ ಸಹೋದರಿಯರಿದ್ದಾರೆ. ಆತ್ಮಹತ್ಯೆ ಕುರಿತಂತೆ ಸಿರವಾರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.