ಬೀದಿ ನಾಯಿ ಹಿಡಿಯಲು ಮುಂದಾದ ನಗರಸಭೆ: ಗ್ರಾಮೀಣ ಭಾಗದಲ್ಲಿಯೂ ಶ್ವಾನಗಳ ಕಾಟ

IMG-20241212-WA0000
Published on

ರಾಯಚೂರು: ಬೀದಿನಾಯಿಗಳ ದಾಳಿಯಿಂದ ರಾಯಚೂರು ನಗರದ ವಿವಿಧೆಡೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ನಗರಸಭೆಯಿಂದ ಬೀದಿ ನಾಯಿಗಳನ್ನು ಸೆರೆಹಿಡಿಯುವ ಕಾರ್ಯ ಚುರುಕುಗೊಂಡಿದೆ.

ನಗರದ ಮಡ್ಡಿಪೇಟೆ ನಿವಾಸಿ ಮಹಾದೇವಿ ಎಂಬುವವರು ಬೀದಿ ನಾಯಿಗಳ ದಾಳಿಯಿಂದ ತಲೆಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿ ಬುಧವಾರ ಸಾವನಪ್ಪಿದ್ದರು. ಈ ವಿಚಾರಕ್ಕೆ ನಗರದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಬೀದಿ ನಾಯಿಗಳನ್ನು ಸೆರೆಹಿಡಿಯಲು ನಗರಸಭೆ ಮುಂದಾಗಿದೆ.

ಈ ಹಿಂದೆಯೂ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು, ವೃದ್ಧರಿಗೆ ಗಾಯಗಳಾಗಿರುವ ಉದಾಹರಣೆಗಳಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಬುಧವಾರದಿಂದ ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದೆ.

ರಾಯಚೂರು ನಗರ ಮಾತ್ರವಲ್ಲದೇ ರಾಯಚೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಕ್ರಮಕ್ಕಾಗಿ ವಿವಿಧ ಸಂಘಟನೆಗಳಿಂದ ಆಯಾ ಗ್ರಾ.ಪಂಗೆ ಪತ್ರ ಬರೆದರೆ ಒಂದು ನಾಯಿಗೆ ಇಂತಿಷ್ಟು ಮೊತ್ತವೆಂದು ಪಂಚಾಯತಿಯಿಂದ ನೀಡುತ್ತೇವೆ ನೀವೆ ನಾಯಿಗಳನ್ನು ಹಿಡಿಯುವವರನ್ನು ಹುಡುಕಿ ಎಂಬ ಹಾರಿಕೆಯ ಉತ್ತರವನ್ನು ಸಂಘಟನೆಗಳಿಗೆ ನೀಡುತ್ತಿದ್ದಾರೆ. ರಾಯಚೂರು ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ನಾಯಿ ಸೆರೆಹಿಡಿಯುವ ಕಾರ್ಯಕ್ಕೆ ಆಯಾ ಗ್ರಾ.ಪಂಗಳು ಮುಂದಾದರೇ ಜನರಿಗೆ ಅನುಕೂಲವಾಗಲಿದೆ.

ಕಟ್ಲಟ್ಕೂರಿನಲ್ಲಿ ಬಾಲಕಿ ಸಾವು: 

ಬೀದಿ ನಾಯಿಗಳ ಕಡಿತದಿಂದ ನ.16ರಂದು ರಾಯಚೂರು ತಾಲೂಕಿನ ಕಟ್ಲಟ್ಕೂರು ಗ್ರಾಮದ ಸರಿತಾ(8) ಎಂಬ ಬಾಲಕಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ಸಾವಿನ ಬಳಿಕ ಚಂದ್ರಬಂಡಾ ಗ್ರಾ.ಪಂನಿಂದ ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನ.22ರಂದು ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಪತ್ರವನ್ನು ಬರೆಯಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಈಗಾಗಲೇ ನಾಯಿಗಳನ್ನು ಸೆರೆಹಿಡಿಯುವ ಕಾರ್ಯಆರಂಭಿಸಲಾಗಿದೆ. ನಿಯಂತ್ರಣವಾಗಿಲ್ಲದಿರುವ ಬಗ್ಗೆ ದೂರುಗಳು ಬಂದಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. | ಕೆ.ನಿತೀಶ, ಡಿಸಿ ರಾಯಚೂರು. ಗ್ರಾಮದಲ್ಲಿ ನಾಯಿಗಳ ಕಾಟ ವಿಪರೀತವಾಗಿದೆ. ಮಕ್ಕಳು, ವೃದ್ಧರು ರಸ್ತೆಯಲ್ಲಿ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕಿದೆ. | ಶ್ರೀಹರಿ ನಾಯಕ, ಕಟ್ಲಟ್ಕೂರು ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net