ಬೀದಿನಾಯಿಗಳ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ವಿಫಲ

CPIM
Published on

ರಾಯಚೂರು: ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟರುವ ಮಹಾದೇವಿ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಹಾಗೂ ನಗರದಲ್ಲಿ ಬೀದಿ ನಾಯಿಗಳು, ಬೀಡಾಡಿ ದನಗಳ ನಿಯಂತ್ರಣಕ್ಕೆ ಒತ್ತಾಯಿಸಿ ಸಿಪಿಐಎಂ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ನಡೆಸುತ್ತಿವೆ, ವಾರ್ಡ ನಂ.23ರ ಮಡ್ಡಿಪೇಟೆ ಬಡವಾಣೆಯ ನಿವಾಸಿ ಮಹಾದೇವಿ ಎನ್ನುವರು ಮನೆ ಮುಂದೆ ನಿಂತಿದ್ದಾಗ ಬೀದಿ ನಾಯಿಗಳ ಗುಂಪು ದಾಳಿ ನಡೆಸಿವೆ, ಇದರಿಂದ ಗಾಯಗೊಂಡ ಮಹಿಳೆ ಕೋಮಾ ಸ್ಥಿತಿಗೆ ತಲುಪಿ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರದಲ್ಲಿ ಬೀದಿ ನಾಯಿಗಳನ್ನು ನಿಯಂತ್ರಣ ಮಾಡುವಲ್ಲಿ ನಗರಸಭೆ, ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದರು.

ಈ ಹಿಂದೆಯೂ ಬೀದಿ ನಾಯಿಗಳ ದಾಳಿಯಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ, ಕೊಳಗೇರಿ ಬಡಾವಣೆಗಳಾದ ಮಡ್ಡಿಪೇಟೆ, ಎಲ್.ಬಿ.ಎಸ್ ನಗರ, ಸಿಯಾತಲಾಬ್, ಹರಿಜನವಾಡ, ಜಲಾಲ ನಗರ, ಮೈಲಾರ ನಗರ, ಕಾಳಿದಾಸನಗರ , ಜಹಿರಾಬಾದ್, ಸ್ಟೇಷನ್ ಏರಿಯಾ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕರು, ವೃದ್ಧರು, ಬಡಾವಣೆಗಳಲ್ಲಿ ಆಟ ಆಡುವ ಮಕ್ಕಳು, ರಸ್ತೆಗಳಲ್ಲಿ ವಾಹನಗಳ ಮೇಲೆ ಸಂಚಾರಿಸುವ ದ್ವಿ-ಚಕ್ರ ಸವಾರರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಉದಾಹರಣೆಗಳಿದ್ದರೂ ಬೀದಿ ನಾಯಿಗಳ ಹಾಗೂ ಬೀಡಾಡಿ ದನಗಳ ಹಾವಳಿಯನ್ನು ತಪ್ಪಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ರಸ್ತೆ ಮೇಲೆ ಬೀಡಾದಿ ದನಗಳನ್ನು ಬಿಡದೇ ಅವುಗಳನ್ನು ಗೋಶಾಲಾಕ್ಕೆ ಸ್ಥಳಾಂತರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಮತ್ತು ಮೃತ ಬಡ ಮಹಿಳೆ ಮಹಾದೇವಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಧನವನ್ನು ನಗರ ಸಭೆ ಮತ್ತು ಜಿಲ್ಲಾಡಳಿತದಿಂದ ನೀಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ, ತಾಲೂಕ ಕಾರ್ಯದರ್ಶಿ ಎಚ್.ಪದ್ಮಾ, ಡಿ.ಎಸ್.ಶರಣಬಸವ, ಶರಣಮ್ಮ, ವರಲಕ್ಷ್ಮೀ, ಕರಿಯಪ್ಪ ಅಚ್ಚೊಳ್ಳಿ, ಮೃತ ಮಹಿಳೆಯ ಪೋಷಕರಾದ ಮುನಿಯಪ್ಪ, ಶಿವಮ್ಮ, ನಾಗರಾಜ, ನಾಗೇಶ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net