

ರಾಯಚೂರು: ನಗರ ಸೇರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನರಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೆ ಗುರುವಾರ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಸೆರೆಹಿಡಿಯಲು ಮುಂದಾಗಿದ್ದಾರೆ.
ಬೀದಿ ನಾಯಿಗಳ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವಿಜಯವಾಣಿ ಜು.14ರಂದು ಹುಚ್ಚು ನಾಯಿ ಕಚ್ಚೀತು ಜೋಕೆ… ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಎರಡು ದಿನದಲ್ಲಿ ನಾಯಿಗಳನ್ನು ಸೆರೆಹಿಡಿಯುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನಗರಸಭೆ ತಿಳಿಸಿತ್ತು. ಜು.18ರಂದು ಪತ್ರಿಕೆಯಲ್ಲಿ ಕುರಿತು ವರದಿ ಪ್ರಕಟಗೊಂಡಿತ್ತು. ಈ ಬಗ್ಗೆ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜು.18ರಿಂದ ನಾಯಿಗಳನ್ನು ಸೆರೆಹಿಡಿಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಬೀದಿ ನಾಯಿಗಳನ್ನು ಸೆರೆಹಿಡಿಯಲು ಪುಣೆಯ ಡಾಗ್ ಕ್ಯಾಚರ್ಸ್‌ಗಳಿಗೆ ಟೆಂಡರ್ ನೀಡ ಲಾಗಿದೆ. ನಗರದಲ್ಲಿರುವ ಒಟ್ಟು ನಾಯಿಗಳಲ್ಲಿ ಶೇ.25 ನಾಯಿಗಳನ್ನು ಸೆರೆಹಿಡಿದು ಚುಚ್ಚುಮದ್ದು ಗಳನ್ನು ನೀಡಲಾಗುತ್ತದೆ. ನಗರದ ವಿವಿಧ ಬಡಾವಣೆಗಳಲ್ಲಿರುವ ಬೀದಿ ನಾಯಿಗಳನ್ನು ಗಂಡು ನಾಯಿಗಳಿಗೆ ಸಂತಾನ ನಿಯಂತ್ರಣ ಚಿಕಿತ್ಸೆ ನೀಡಿ ಮತ್ತು ಎಲ್ಲ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದುಗಳನ್ನು ನೀಡಲು ನಗರಸಭೆ ಮುಂದಾಗಿದೆ. 6 ತಿಂಗಳ ಹಿಂದೆ ಕೈಗೆತ್ತಿಕೊಳ್ಳಲಾದ ಬೀದಿ ನಾಯಿಗಳ ಸೆರೆಹಿಡಿಯುವ ಕಾರ್ಯ ಇದೀಗ ಮತ್ತೆ ಮುಂದುವರೆದಿದೆ. ನಗರದಲ್ಲಿ ಒಟ್ಟು 8000ಕ್ಕೂ ಹೆಚ್ಚು ನಾಯಿಗಳಿವೆ ಎಂಬ ಮಾಹಿತಿ ಇದ್ದು, ಅದರಲ್ಲಿ ಪ್ರಸ್ತುತ 1800 ನಾಯಿಗಳಿಗೆ ಚಿಕಿತ್ಸೆ ಹಾಗೂ ಚುಚ್ಚುಮದ್ದು ನೀಡಲು ಟೆಂಡರ್ ಕರೆಯಲಾಗಿದೆ.ಬೀದಿ ನಾಯಿಗಳನ್ನು ಸೆರೆ ಹಿಡಿಯಲು ಮುಂದಾಗಿ ಜನರ ಸಮಸ್ಯೆಯನ್ನು ಬಗೆಹರಿಸಲು ಪತ್ರಿಕೆಯ ವರದಿಯನ್ನಾಧರಿಸಿ ಎಚ್ಚೆತ್ತುಕೊಂಡ ನಗರಸಭೆ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ನಿರ್ಲಕ್ಷೃ ವಹಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರಸಭೆ ಅನುದಾನದಲ್ಲಿ ನಾಯಿಗಳ ಸೆರೆಹಿಡಿಯಲು ಹಾಗೂ ಸಂತಾನ ನಿಯಂತ್ರಣ ಚಿಕಿತ್ಸೆಗೆ ಅನುದಾನವನ್ನು ಮೀಸಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಸಮಸ್ಯೆ ಉಂಟಾಗದಂತೆ ನಗರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು.| ಗುರುಸಿದ್ದಯ್ಯ ಹಿರೆಮಠ್ ಪೌರಾಯುಕ್ತ, ನಗರಸಭೆ ರಾಯಚೂರು.