

‘ಮರಗಳು ಮಾತಾಡಿದ್ರೆ’ ಕವನ ಸಂಕಲನ ಬಿಡುಗಡೆ | ಎಳೆಯ ಮನದ ಮನೋಧರ್ಮ ಬಿಚ್ಚಿಟ್ಟ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು
ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಮಕ್ಕಳ ಸಾಹಿತ್ಯ ರಚನೆ ಬಗ್ಗೆ ಕವಿ-ಕವಯಿತ್ರಿಯರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಹಿರಿಯ ಸಾಹಿತಿ ಮಂಡಲಗಿರಿ ಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಸ್ಪಂದನ ಸಾಹಿತ್ಯ ವೇದಿಕೆ, ವೈಷ್ಣವಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ‘ಮರಗಳು ಮಾತಾಡಿದ್ರೆ’ ಎಂಬ ಮಕ್ಕಳ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಾಹಿತಿಗಳ ಕೊರತೆ ಕಂಡು ಬರುತ್ತಿದೆ. ಬರಹಗಾರರು ಕೂಡ ಮಕ್ಕಳ ಸಾಹಿತ್ಯದ ಬಗ್ಗೆ ಒಲವು ತೋರುತ್ತಿಲ್ಲ. ಕೆಲ ಸಾಹಿತಿಗಳು ಮಕ್ಕಳ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಆದರೆ, ಅವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಈ ಸಂಖ್ಯೆ ಹೆಚ್ಚಾಗಬೇಕಿದೆ. ಆದ್ದರಿಂದ, ಮಕ್ಕಳ ಮನೋಧರ್ಮ ಬಿಡಿಸಿ ಹೇಳುವಂತೆ ವೈವಿಧ್ಯಮಯ ಕೃತಿಗಳ ರಚನೆ ಆಗಬೇಕಿದೆ. ಮಕ್ಕಳ ಸಾಹಿತ್ಯದ ಚಟುವಟಿಕೆಗಳ ಬಗ್ಗೆ ಹಿರಿಯರು, ಸಂಘ, ಸಂಸ್ಥೆ, ಪರಿಷತ್ತುಗಳು ಗಮನ ಹರಿಸಬೇಕಿದೆ ಎಂದರು.
ಮಕ್ಕಳು ಕೂಡ ಸಾಹಿತ್ಯದ ಜ್ಞಾನ ಬೆಳೆಸಿಕೊಳ್ಳಬೇಕು. ಈ ಮೂಲಕ ಅವರು ಕ್ರಿಯಾಶೀಲರಾಗಬೇಕು. ಬಾಲ್ಯವನ್ನು ಮರೆತವರಿಂದ ಮಕ್ಕಳ ಸಾಹಿತ್ಯ ಬರೆಯಲು ಸಾಧ್ಯವಿಲ್ಲ. ಆದರೆ, ಈ ಕೊರತೆಯನ್ನು ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು ನೀಗಿಸಿದ್ದಾರೆ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಸಮಯ ಮಾಡಿಕೊಂಡು ಮಕ್ಕಳ ಸಾಹಿತ್ಯವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಂಕರದೇವರು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಗುಂಡೂರಾವ್ ದೇಸಾಯಿ, ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು, ಶಾರದಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಮಧುಸೂದನ್ ಗುಪ್ತಾ, ಸಂಗನಗೌಡ ಮಾಲಿಪಾಟೀಲ್, ವಿಜಯ ರಾಜೇಂದ್ರ ಇದ್ದರು.