

ರಾಯಚೂರು: ವಿದ್ಯಾರ್ಥಿಗಳ ಕ್ರೀಡಾಸಕ್ತಿ ಮತ್ತು ತರಬೇತುದಾರರಿಂದ ರಾಯಚೂರು ವಿಶ್ವವಿದ್ಯಾಲಯ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಸಾಧ್ಯವಾಗಿದೆ ಎಂದು ವಿವಿಯ ಕಲಾ ವಿಭಾಗದ ಡೀನ್ ಪ್ರೊ.ಸಿ.ಎಸ್.ಪಾರ್ವತಿ ಹೇಳಿದರು.
ನಗರದ ರಾಯಚೂರು ವಿವಿಯ ತುಂಗಾ ಆವರಣದಲ್ಲಿ ಹಮ್ಮಿಕೊಂಡ್ಡಿದ್ದ ಪುರುಷರ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಿಂದ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಚನೈನಲ್ಲಿ ಅ.30ರಿಂದ ನ.4ರವರೆಗೆ ದಕ್ಷಿಣ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಯ ಗಳಿಸಿ ವಿಶ್ವವಿದ್ಯಾಲಯಕ್ಕೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಅತ್ಯಂತ ಕಡಿಮೆ ಸಮಯದಲ್ಲಿ ವಿವಿಯಲ್ಲಿ ಕ್ರೀಡಾ ಚಟುವಟಿಕೆಗಳು ವೇಗ ಪಡೆದಿರುವುದು ಉತ್ತಮ ಭವಿಷ್ಯದ ಮುನ್ನೋಟವಾಗಿದೆ ಎಂದರು. ಆಯ್ಕೆ ಪ್ರಕ್ರಿಯೆಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 30ಕ್ಕೂ ಹೆಚ್ಚು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಸಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಲತಾ, ವಿವಿಯ ಕ್ರೀಡಾ ಸಂಯೋಜಕ ಎನ್.ಮಲ್ಲಿಕಾರ್ಜುನ, ಪ್ರಮುಖರಾದ ಡಾ.ರಮೇಶ ಶಹಪುರಕರ್, ಡಾ.ವೀರೇಶ ನಾಯಕ, ಡಾ.ಧನಂಜಯ, ಅಮರೇಶ ನಾಯಕ,ಡಾ. ಶರಣಬಸವರಾಜ, ವಿಜಯ ಸರೋದೆ, ವಿ.ಎಸ್.ನಾಗವೇಣಿ, ಅನೀಲ್ ಅಪ್ರಾಳ ಸೇರಿದಂತೆ ಇತರರಿದ್ದರು.