

ರಾಯಚೂರು: ಜಿಲ್ಲೆಯಲ್ಲಿರುವ ಸ್ಲಂ ಪ್ರದೇಶಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಇದನ್ನೂ ಓದಿ: ಕೊಳಗೇರಿ ವಸತಿ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಿ
ಜಿಲ್ಲೆಯಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತೀರಾ ಬೇಜವಾಬ್ದಾರಿತನದಿಂದ ಕಾರ್ಯ ನಿರ್ವಹಿಸುತ್ತಿದ್ದೀರಿ. ಕೇವಲ ಕಚೇರಿಯಲ್ಲಿ ಕೂತು ಕೆಲಸ ಮಾಡುವುದಲ್ಲ ಸ್ಥಳ ಪರಿಶೀಲನೆ ಮಾಡಬೇಕು ಕಾಲಮಿತಿಯೊಳಗೆ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದ ಗುತ್ತಿಗೆ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ವಿಳಂಬ ಮಾಡಿರುವುದಕ್ಕೆ ದಂಡ ಹಾಕಬೇಕು ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಸ್ಲಂ ಬೋರ್ಡ್‌ನ ಅಧಿಕಾರಿಗಳು ಕೇವಲ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳನ್ನು ನೀಡುವ, ಹಕ್ಕು ಪತ್ರ ವಿತರಿಸುವ ಕೆಲಸ ಮಾತ್ರವಲ್ಲದೇ ಆ ಪ್ರದೇಶಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಲು ಮುಂದಾಗಬೇಕು. ನಗರ ಭಾಗದ ಹಲವು ಕೊಳಚೆ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯಗಳಿಲ್ಲದೇ ಬಯಲಿನಲ್ಲಿ ಶೌಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಶೌಚಾಲಯಗಳನ್ನು ನಿರ್ಮಾಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಸ್ಲಂ ಏರಿಯಾಗಳಲ್ಲಿ ಶೌಚಾಲಯ ಸಮಸ್ಯೆಗಳು ಉಂಟಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಆರ್. ಅಶೋಕ ವಿರುದ್ಧ ಸಿಡಿದೆದ್ದ ಜಮೀರ್
ಜಿಲ್ಲೆಯಲ್ಲಿ ಸರ್ಕಾರಿ, ನಗರಸಭೆ, ಪುರಸಭೆ ಹಾಗೂ ಖಾಸಗಿ ಮಾಲೀಕತ್ವದಲ್ಲಿ 82 ಕೊಳಚೆ ಪ್ರದೇಶಗಳಿದ್ದು, 24389 ಕುಟುಂಬಗಳು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಈ ಎಲ್ಲ ಕುಟುಂಬಗಳಿಗೆ ಅನುಕೂಲವಾಗುವಂತೆ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಘೋಷಣೆಗೆ ಬಾಕಿ ಇರುವ ಕೊಳಚೆ ಪ್ರದೇಶಗಳನ್ನು ಶೀಘ್ರದಲ್ಲಿಯೇ ಘೋಷಿತ ಕೊಳಚೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದರು.
ರಾಯಚೂರು ನಗರದ 14 ಕೊಳಚೆ ಪ್ರದೇಶಗಳು, ದೇವದುರ್ಗ ಪಟ್ಟಣದ 8 ಹಾಗೂ ಮಾನವಿ ಪಟ್ಟಣದ 4 ಕೊಳಚೆ ಪ್ರದೇಶಗಳು ವಿವಿಧ ಕಾರಣಗಳಿಂದ ಘೋಷಣೆಯಾಗದೇ ಬಾಕಿ ಉಳಿದಿವೆ ಶೀಘ್ರವೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಘೋಷಿತ 61 ಕೊಳಚೆ ಪ್ರದೇಶಗಳಲ್ಲಿನ 5751 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಉಳಿದ 11946 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಶೀಘ್ರವೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಂಡಳಿ ಜಿಲ್ಲಾಧಿಕಾರಿ ಕೆ.ನಿತೀಶ್, ಎಸ್‌ಪಿ ಎಂ.ಪುಟ್ಟಮಾದಯ್ಯ, ಮಂಡಳಿ ಆಯುಕ್ತ ಡಿ.ಎಸ್ ಅಶೋಕ್, ಕಲಬುರಗಿ ವಿಭಾಗೀಯ ತಾಂತ್ರಿಕ ನಿರ್ದೇಶಕ ಎಂ.ಎ ಕಯ್ಯೂಮ್, ನಗರಾಭಿವೃದ್ಧಿ ಕೋಶದ ಪಿಡಿ ಜಗದೀಶ್ ಗಂಗಣ್ಣವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ್, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವೇಂದ್ರಕುಮಾರ್ ಸೇರಿದಂತೆ ಇತರರಿದ್ದರು.